ಮರಳಿ ಮರಳಿ ಯತ್ನ… ಮುಂದುವರೆದ ಭಾಗ

ಮರಳಿ ಮರಳಿ ಯತ್ನ…

ನನಗೆ ನಾನೇ ಎಲ್ಲವನ್ನೂ ಹೇಳಿಕೊಂಡೆ. ಮೊದಲ ಬಾರಿ ಎಲ್ಲಾ ದೃಷ್ಟಿಕೋನದಿಂದ ಪ್ರತಿಯೊಂದನ್ನು ನೋಡಲಾರಂಭಿಸಿದೆ. ಯಾವುದು ಮುಖ್ಯ, ಮತ್ತ್ಯಾವುದು ಅಲ್ಲ ಅನ್ನುವ ತಿಳುವಳಿಕೆ ಬೇಗನೆ ನನ್ನ ಕೈ ಸೇರಿತ್ತು. ಹಾಗಂತ ಹೇಳಿಕೊಂಡದ್ದು, ನೋಡಿದ್ದೆಲ್ಲವೂ ಮಹತ್ವದ್ದು ಅಂತ ಅದರ ಅರ್ಥವಲ್ಲ. ಬಿಟ್ಟಿದ್ದನ್ನು ಮತ್ತೆ ಮತ್ತೆ ಹೇಳಿಕೊಂಡಾಗಲೇ ಅದರ ಹಲವಾರು ಮಗ್ಗುಲು ಹೊಳೆದ್ದದ್ದು. ಪ್ರತಿಬಾರಿ ಹೇಳಿದಾಗಲೂ, ನೋಡಿದಾಗಲೂ, ವಿಶ್ಲೇಷಿಸಿದಾಗಲೂ ಬೇರೆಯಾಗಿಯೇ ಕಾಣುತ್ತದೆ. ಅದರ ಹಿಂದಿನ ಅರ್ಥ, ಹಲವು ಸಂಗತಿಗಳ ಮರ್ಮ ಆಗ ತಾನೇ ಗೋಚರವಾಗತೊಡಗಿತ್ತು. ಯಾವುದು ಅಷ್ಟು ವರ್ಷಗಳ ಹಿಂದೆ ಬರೀ ಆ ಕ್ಷಣದ ಪ್ರತಿಕ್ರಿಯೆಯಾಗಿ ಕಂಡಿತ್ತೋ ಅದೆಲ್ಲ ಬೇರಾವುದೋ ಅದೃಶ್ಯ ನಕ್ಷೆಯ ಭಾಗವೆಂಬಂತೆ ಈ ಸಮಯದಲ್ಲಿ ಕಾಣಿಸಲು ತೊಡಗಿದೆ!

ತಾನಾಗಿಯೇ ಕಂಡ ದಾರಿಯನ್ನು ಹುಡುಕಲಿಕ್ಕೆ ಹೋದಾಗ ಸಂಭವಿಸಿದ ಘಟನೆಗಳು ಮುಂದಿನ ಹಲವು ನಿರ್ಧಾರಗಳಿಗೆ ಕಾರಣವಾದವು. ನಿರ್ಧಾರಗಳು ಅನ್ನುವುದಕ್ಕಿಂತ ಆ ಸಮಯಕ್ಕೆ ಅನಿಸಿದ ಬಯಕೆಗಳು ಎಂದರೆ ಅವುಗಳಿಗೆ ಸಂಪೂರ್ಣ ನ್ಯಾಯ ಒದಗಿಸಿದಂತಾಗುತ್ತದೇನೋ? ಅಲ್ಲಿ ಹೋಗದೇ ಇರುತ್ತಿದ್ದರೆ ಎಲ್ಲಿಗೂ ಹೋಗುತ್ತಿರಲ್ಲಿಲ್ಲವೇನೋ! ಎಲ್ಲವೂ ಬೇರೇನೋ ಆಗಿಬಿಡುತ್ತಿತ್ತೇನೋ! ನಾನೂ ಕೂಡ ಬೇರೆಯಾಗಿಯೇ ಇರುತ್ತಿದ್ದನೇನೋ! ಎಲ್ಲವುಗಳ ರಹಸ್ಯ ಆ ಹಾದಿಯಲ್ಲಿ ನಡೆದಾಗಲೇ ಅಲ್ಲವೇ ತಿಳಿಯುವುದು. ಹಾಗೆಯೇ ಊಹಿಸಿದ್ದೆಲ್ಲವೂ ನಿಗೂಢವೇ.

ಅಷ್ಟು ಬೇಗ ನನ್ನ ಜೀವನ ಬದಲಾದೀತು ಎಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ. ನನ್ನದಲ್ಲದ ಬದುಕು ನನ್ನದಾಗಿ ಬಿಡಬಹುದೇನೋ ಎಂಬ ಅಳುಕು ಧೂಳುಮಯ ಗಾಳಿ ತೂರಿತೆಂಬಂತೆ ಬಂದು ಕಣ್ಣೀರು ಉಕ್ಕಿತ್ತು. ಹೊರ ಬಂದ ಸ್ವಲ್ಪ ಸಮಯದಲ್ಲೇ ಅದೆಲ್ಲವೂ ಬದಲಾಗಿತ್ತು. ಹೊಸ ಅನುಭವಗಳೊಂದಿಗೆ ವಿಕಾಸದ ಹಾದಿ ನನ್ನನ್ನ ಬರಮಾಡಿತ್ತು…

ಅಲ್ಲಿಯವರೆಗೂ ನನ್ನ ಪರಿಮಿತಿಯಲ್ಲಿದ್ದಂತೆ ತೋರುತ್ತಿದ್ದ ಕಾಲ ಬರೀ ಭ್ರಮೆಯಾಗಿ ಕಂಡಿತು. ನನ್ನದಲ್ಲದ ಬದುಕು ನಡೆಸಿದಾಗ ಅಲ್ಲಿ ಕಳೆದ ಕಾಲಕ್ಕೆ ಅರ್ಥವಿರಲಿಲ್ಲ. ಪ್ರತಿ ಹೆಜ್ಜೆಯೂ ಅಲ್ಪ ಮನಸ್ಸಿನಲ್ಲಿ ನಡೆದಿತ್ತು. ಹೊಸತನಕ್ಕೆ ನಾನು ಹಾತೊರೆದಿದ್ದೆ. ಆ ದಿನಗಳಲ್ಲಿ ಮೊದಲೆಲ್ಲ ಮನಸ್ಸಿನ ಬವಣೆಗಳನ್ನು ಒಳ ನುಂಗುಲು ಕಲಿಯುವ ಪ್ರಯತ್ನದಲ್ಲಿ ಸೋತು ಹೊರ ಉಗುಳಿದ್ದೆ. ದಿನಗಳು ಅಕ್ಷರಶಃ ಗಾಣದ ಹಾಗೆ ಒಂದೇ ರೀತಿ ಗರಗರ ತಿರುಗುತ್ತಿದ್ದವು. ಅದರ ಅಕ್ಷದಿಂದ ತಪ್ಪಿಸಿಕೊಂಡು ಹೋಗುವ  ಧೈರ್ಯವಾಗಲೀ, ಬಲವಾಗಲೀ ಬರಲು ಹೆಚ್ಚಿನ ಸಮಯವೇನೂ ಹಿಡಿಯಲಿಲ್ಲ. ಎಷ್ಟು ಪ್ರಯತ್ನಿಸಿದರೂ ಆಕಸ್ಮಿಕಗಳೇ ಘಟಿಸದ ಬದುಕು. ಎಲ್ಲವೂ ಮೊದಲೇ ಗೊತ್ತಿರುವ ಹಾದಿ. ಅಂತಹ ಸಮಯದಲ್ಲಿ ಪಲ್ಲಟಗಳನ್ನು ಎದುರಿಸಲು ಧೈರ್ಯದ ಜೊತೆಗೆ ಮನಸ್ಸು ಬೇಕಿತ್ತು. ಆ ಮನಸ್ಸು ನನ್ನದಾಗಿತ್ತು. ಪ್ರತಿಭಟಿಸದೇ ಹಿಡಿದ ಕೆಲಸವನ್ನೂ ಕೂಡ ಕಳೆದುಕೊಳ್ಳಲು ತಯಾರಾಗದಂತವನಿಂದ ಯಾವ ಬದಲಾವಣೆ ಸಾಧ್ಯ? ಎಂಬ ಆತ್ಮಸಾಕ್ಷಿಯ ಅಣುಕು ನನ್ನ ಮುಂದಿತ್ತು. ಅದರ ಒಡನಾಡಿಯಾಗಿ ಬದಲಾವಣೆ ಬೇಕೇ ಬೇಕೆಂದು ಜೀವನ ಹವಣಿಸುತ್ತಿತ್ತು.

ಯಾವುದು ಸರಿ, ಯಾವುದು ತಪ್ಪು, ಯಾವುದು ಆಶಯ, ಮತ್ತ್ಯಾವುದು ನಿರಾಶಯ ಎಂದು ಹುಡುಕುವ ಮೊದಲೇ ಒಂದರಿಂದ ತಪ್ಪಿಸಿಕೊಂಡು ಇನ್ನೊಂದರಲ್ಲಿ ಬಿದ್ದೆ. ಯಾವುದರ ವಿರುದ್ಧ ನನ್ನ ಬಂಡಾಯ ಎಂದು ತಿಳಿದದ್ದು ಬಿದ್ದು ಎದ್ದಾಗಲೇ. ಅದರೊಟ್ಟಿಗೆ ಸಹಾಯಕ್ಕೆ ಬಂದದ್ದು ಪ್ರತಿ ಸೂಕ್ಷ್ಮತೆಗಳನ್ನು ಬಹಳ ಬೇಗ ಗಮನಿಸುವ ಮನಸ್ಸು; ಹೇಗಾದರೂ ಬಡವರ ಮನೆ ಮಗ ಬೇಗ ದೊಡ್ದವನಾಗಬೇಕಲ್ಲ!

ಅಂತದ್ದೊಂದು ಸಮಯ ಹುಟ್ಟುತ್ತದೆ ಅಂದುಕೊಂಡಿರಲಿಲ್ಲ. ಹುಟ್ಟಲಿ ಎಂದು ಆಸೆ ಪಟ್ಟೆ, ಬೇಡಿಕೊಂಡೆ. ಅಂತದ್ದೊಂದು ಇದೆ ಎಂಬಂತೆ ವರ್ತಿಸಿದೆ. ಆದರೂ ಆ ಹೊತ್ತಿನಲ್ಲಿ ಅದು ಇರಲಿಲ್ಲ ಅನ್ನುವುದು ನನಗೆ ಸ್ಪಷ್ಟವಾಗಿ ಅರಿವಿತ್ತು. ಆಗ ನಾನು ಯಾವುದರಲ್ಲಿಯೂ ಗಟ್ಟಿಯಾಗಿ ಊರಿಕೊಳ್ಳಲಾಗದೆ, ಯಾವುದರ ಬಗ್ಗೆಯೂ ಅತಿಯಾದ ಮೋಹವಿಲ್ಲದವನಾಗಿದ್ದೆ. ಜೀವವನ್ನೇ ಹಿಂಡುವ ಆಸೆಗಳಾಗಲಿ, ಆದರ್ಶಗಳಾಗಲಿ ಇರಲಿಲ್ಲ. ಜೀವನ ಆರಾಮ ನಡೆದಿತ್ತು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಯಾವುದಾದರೂ, ಏನಾದರೂ, ಹೇಗಾದರೂ ತೀವ್ರವಾಗಿ ಆಗಿ ಹೋಗಲಿ ಎಂದು ಎಷ್ಟೋ ಸಲ ಬಯಸಿದ್ದುಂಟು.

ಅದಕ್ಕೆ ಕಾಲದ ಬಗ್ಗೆ ಕೋಪವಿತ್ತು…

ಆದ್ದರಿಂದ ಎಲ್ಲವನ್ನೂ ಬಿಟ್ಟು ಹೊಸದನ್ನು, ಅದು ಏನೆಂದು ಗೊತ್ತಿಲ್ಲದ ಅನಿಶ್ಚಯವನ್ನು ನಾನು ಹರಸಿಕೊಂಡು ಹೊರಟೆ, ಪ್ರತಿ ಬಾರಿ ಕವಲುದಾರಿಯಲ್ಲಿ ನಿಂತಾಗಲೂ ಗೊತ್ತಿದ್ದನ್ನೇ ಆರಿಸಿಕೊಂಡಿದ್ದೆ!

ಮುಂದುವರೆಯುವುದು…

ಇಂತಿ ನಿಮ್ಮವ; @ Triple K 🙂

Advertisements

ಮರಳಿ ಮರಳಿ ಯತ್ನ…

ನದಿಯು ಸಮುದ್ರವನ್ನು ಸೇರುವ ತಾಣ ದೂರದಿಂದ ಶಾಂತ ಮನೋಹರವಾಗಿ ತೋರಿದರೂ, ಆ ಅಳಿವೆಯ ನಡುವೆ ಹೋಗಿ ನೋಡಿದಾಗಲೇ ನದಿಯೂ ಸಾಗರವನ್ನು ಸೇರುವಾಗಿನ ಕೋಲಾಹಲ ಕಾಣುವುದು. ಅಂತೆಯೇ ಬದಲಾವಣೆಗಾಗಿ ಸೆಣೆಸುತ್ತಿರುವ ನನ್ನ ಜೀವನವೂ.

ಪ್ರತಿ ಬಾರಿ ಸೋತಾಗಲೂ ಮೊದಲಿನಿಂದ ಶುರುಮಾಡಲು ಪ್ರಯತ್ನಿಸಿದೆ. ಆದರೆ ಕಾಲಾನುಕ್ರಮೇಣ ಅನುಸರಿಸಲು ಅಸಾಧ್ಯವಾದ್ದಷ್ಟು ಸಂಗತಿಗಳು ಹೊರಬರಲು ನುಗ್ಗುತ್ತಿದ್ದವು. ಯಾವುದನ್ನು ಮೊದಲು ಮಾಡಬೇಕೆಂಬ ಒತ್ತಡದಲ್ಲಿ, ಇನ್ನ್ಯಾವುದನ್ನೋ ಮಾಡಹೊರಟು ಮತ್ತೇನೋ ವಿವರಗಳನ್ನು ಸಮಯದ ಮುಂದಿಟ್ಟೆ. ಎಷ್ಟೋ ಬಾರಿ ಮುಖ್ಯ ಸಂಗತಿಗಳನ್ನು ಒಂದೇ ಗಳಿಗೆಯಲ್ಲೂ, ಉಳಿದವನ್ನು ವಿವರವಾಗಿ ಮಾಡಿಕೊಂಡೆ. ಕೆಲವೊಮ್ಮೆ ಏನೂ ಇಲ್ಲದೆಯೇ ದೀರ್ಘ ಮೌನದಲ್ಲಿ ನನ್ನ ಮನದ ಕನವರಿಕೆಗಳನ್ನೇ ನಿರುಮ್ಮಳವಾಗಿ ಕೇಳಿಸಿಕೊಂಡೆ. ಎಲ್ಲವನ್ನೂ ಒಂದೇ ಬಾರಿ ಆಡಿ ಮುಗಿಸುವುದು ಸಾಧ್ಯವಿಲ್ಲವೆಂದು ಮಧ್ಯದಲ್ಲೇ ನಿಲ್ಲಿಸ್ಸಿದ್ದುಂಟು. ಯಾವುದನ್ನೂ ಪಡೆದುಕೊಳ್ಳುವ ಹಟವಿಲ್ಲದೇ, ಕೊನೆ ಮುಟ್ಟಿಸುವ ಒತ್ತಡವಿಲ್ಲದೇ, ಅಳೆದು ನೋಡಿ ಬೆಲೆ ಕಟ್ಟದೇ, ಸಂದು ಹೋದ ವರ್ಷದ ಆಸೆಯನ್ನು ಮರಳಿ ಕಟ್ಟಲು ಪ್ರಯತ್ನಿಸಬೇಕೆಂದುಕೊಂಡೆ.

ಮಾಡಬೇಕೆಂದು ಆ ಕ್ಷಣಕ್ಕೆ ಅನಿಸಿ ಆ ದಾರಿಯಲ್ಲಿ ಹೊರಟ್ಟಿದ್ದಲ್ಲ. ತುಂಬಾ ದಿನಗಳ ಕಾಲ ಒಳಗೇ ಇತ್ತು ಅದು. ಒಂದು ಕಿಡಿಗೆ ಕಾಯುತ್ತಿತ್ತು. ಸಿಡಿದ್ದದ್ದೇ ಹತ್ತಿ ಉರಿಯಿತು. ಯಾಕೆ ಕಿಡಿ ಸಿಡಿಯಿತೆಂದು ಮಾತಿನಲ್ಲಿ ಹೇಳಲಿಕ್ಕೆ ಸಾಧ್ಯವಿಲ್ಲ. ಸಾವಿರಾರು ಮೈಲುಗಳ ಪಯಣದ ನಂತರ ಬೆವರು ಮೈಗೆ ಅಂಟಿಕೊಂಡ ಗಳಿಗೆಯಲ್ಲಿ ಅದು ಹುಟ್ಟಿತೋ ಏನೋ! ಭೂತಕಾಲವಂತೂ ನನ್ನ ಕೈ ಮೀರಿದ್ದು. ಭವಿಷ್ಯತ್ತಿನಲ್ಲಾದರೂ ಪರಕಾಯ ಪ್ರವೇಶ ಮಾಡಿ ಬೇರೇನೋ ಆಗಿ ಜೀವನವನ್ನು ನೋಡಬೇಕು ಅನಿಸಿತು.

ಇದೆಲ್ಲಾ ಅವಾಸ್ತವಿಕವಾಗಿ ಕಂಡರೂ ಉತ್ಪ್ರೇಕ್ಷೆಯಲ್ಲ. ಆದರೆ ದಾರಿ ಬದಲಾಯಿಸಿಕೊಳ್ಳುವುದರಿಂದ ದೊರಕುವ ಅನುಭವ ಅಂತಿಂಥದ್ದಲ್ಲ. ದಾರಿ ಬದಲಾಗುವುದರಲ್ಲಿ ಏನಿದೆ ಅಂತ ತಾತ್ಸಾರ ಮಾಡಲಿಲ್ಲ, ಏಕೆಂದರೆ ನಮ್ಮ ವ್ಯಕ್ತಿತ್ವಕ್ಕೂ ಅದರಿಂದ ಬಹಳ ವ್ಯತ್ಯಾಸವಾಗುತ್ತದೆ. ಮೊದಮೊದಲು ಅದಕ್ಕೆ ಒಗ್ಗಿಕೊಳ್ಳುವುದು ಕಷ್ಟವಾಯಿತು. ಪುನಃ ಪುನಃ ಶುರುವಿನ ಅಳುಕುಂಟಾಗುತ್ತಿತ್ತು. ನಂತರ ನಾನೇ ಮುಂದೆ ಸರಿದು ಶುರುವನ್ನು ಮುಂದೆ ಕರೆದೆ. ಬೇರೆ ಏನೋ ಆಗಲಿಕ್ಕೆ ಅದೊಂದು ದಾರಿಯಾಯಿತು. ನನಗೆ ಎಟುಕಬಲ್ಲ ದಾರಿಯಾಯಿತು. ನನ್ನ ಹೊಸ ದಾರಿಯೆಂದರೆ ಅದೊಂದು ನನ್ನ ಜಗತ್ತು. ಆ ಜಗತ್ತಿನಲ್ಲಿ ಹೊಸ ಹೆಸರು ಪಡೆದು ನಾನೇ ಮತ್ತೆ ಹುಟ್ಟಿದ್ದೇನೆ ಅನಿಸಿತು. ಆದರೂ ವಿಜಯದ ಮೊದಲ ಸಂಪರ್ಕದ ಎಲ್ಲಾ ಉತ್ಕಟತೆಯನ್ನು, ಹುಚ್ಚು ಹಿಡಿಸುವ ಪರವಶತೆಯನ್ನು, ಅನುಭವಿಸುವ ಅವಕಾಶ ಇನ್ನು ಒದಗಿಲ್ಲ.

ಯಾವ ಕೆಲಸವೇ ಆಗಲಿ ಅಲ್ಲಿ ದಿನನಿತ್ಯದ ರಗಳೆಗಳು ಇದ್ದೇ ಇರುತ್ತವೆ. ಎತ್ತ ನೋಡಿದರೂ ಅವುಗಳದ್ದೇ ದರ್ಬಾರು. ಬಹಳ ಪ್ರತಿಭೆಯಿರುವಾತನಿಗೆ ಅವನ್ನು ಮೀರಲು ಸಾಕಷ್ಟು ಪ್ರೇರಣೆಗಳಿರುತ್ತವೆ. ಆದರೆ ನಮ್ಮಂತಹ ಸಾಧಾರಣದವರಿಗೆ ಮಾತ್ರ ಆ ನಿತ್ಯದ ಬಿಡುಗಡೆಯಿಲ್ಲ.

ಉತ್ತಮತೆಯಿಂತೆಂದು ಮತಿಗೆ ತೋರ್ದೊಡದೇನು? |
ವೃತ್ತಿಯೊಳ್ ಅದೂರಿ ಸ್ವಭಾವಾಂಶವಾಗಲ್ ||
ಮತ್ತು ಮತ್ತನುವರ್ತಿಸುತ; ಭಂಗವಾದಂದು |
ಯತ್ನಿಸಿನ್ನುಂ ಮರಳಿ – ಮಂಕುತಿಮ್ಮ ||

“ಇದು ಉತ್ತಮವಾದದ್ದೆಂದು ಬುದ್ಧಿಶಕ್ತಿಗೆ ತೋರಿದರೇನಂತೆ? ನಡತೆಯಲ್ಲಿ ಅದು ನೆಲೆಸಿ ಸ್ವಭಾವದ ಒಂದು ಭಾಗವಾಗದಿದ್ದರೆ, ಅದರ ಉಪಯೋಗವಾಗುವುದಿಲ್ಲ. ಆದುದ್ದರಿಂದ ಪುನಃ ಪುನಃ ಅದೇ ಕೆಲಸವನ್ನು ಮಾಡುತ್ತಾ, ಸೋಲುಂಟಾದರೂ ಪುನಃ ಪ್ರಯತ್ನಿಸು.”

ಎನ್ನುತ್ತಾರೆ ‘ಕಗ್ಗ‘ದ ಕರ್ತು.

ಆ ಕದ ಮತ್ತೆ ತಟ್ಟುವ ಪ್ರಯತ್ನದಲ್ಲಿ…

ಮುಂದುವರೆಯುವುದು…

ಇಂತಿ ನಿಮ್ಮವ; @ Triple K 🙂

ನ್ಯೂನ್ಯತೆ

ನ್ಯೂನ್ಯತೆ… ನಾವೆಲ್ಲರೂ ನ್ಯೂನ್ಯತೆಗಳನ್ನು ಹೊಂದಿದ್ದೇವೆ, ಆದರೆ ಕೆಲವರು ಮಾತ್ರ ಒಪ್ಪಿಕೊಂಡು, ಅಪ್ಪಿಕೊಳ್ಳುತ್ತೇವೆ. ‘ಸಿಮ್ರಾನ್’ ಚಲನಚಿತ್ರವನ್ನು ನೋಡಿದ ನಂತರ, ಅದು ಹೇಗೆ ನ್ಯೂನ್ಯತೆಗಳನ್ನು ಸ್ವೀಕರಿಸಿದ ಮತ್ತು ಆಚರಿಸಿದ ಕಥೆಯೆಂದು ನಾನು ಅರಿತುಕೊಂಡೆ. ಅನೇಕ ವಿಮರ್ಶಕರು ಕಥೆಯು ದುರ್ಬಲವಾಗಿದೆ, ಚಿತ್ರದ ಒಂದು ಒಳ್ಳೆಯ ಸಂಗತಿಯಂದರೆ ‘ಕಂಗನಾ’ ಎಂದಾಗ, ನಾವು ನಮ್ಮ ಸ್ವಂತ ನ್ಯೂನ್ಯತೆಗಳನ್ನು ಅರ್ಥಮಾಡಿಕೊಂಡು, ಅಪ್ಪಿಕೊಂಡಿದ್ದರೆ ಎಷ್ಟು ಸುಲಭವಾಗಬಹುದಾಗಿತ್ತು ನಮ್ಮ ಜೀವನ ಎಂಬ ತೀವ್ರ ಚಿಂತನೆಯ ಸ್ಥಿತಿ ನನ್ನನ್ನು ಆವರಿಸಿತ್ತು. ಚಲನಚಿತ್ರದ ತಯಾರಿಕೆ ಅಥವಾ ನಿರ್ದಿಷ್ಟ ತಂತ್ರಾಂಶಗಳ ಕರಕುಶಲದ ಬಗ್ಗೆ ನನಗೆ ಹೆಚ್ಚಿನ ಅರಿವಿಲ್ಲದಿರುವುದು ಬೇರೆಯ ವಿಷಯ. ಒಂದು ಸನ್ನಿವೇಶದಲ್ಲಿ ‘ಪ್ರಫುಲ್'(ಕಂಗನಾ) ತನ್ನ ನ್ಯೂನ್ಯತೆಗಳನ್ನು ಚಿತ್ರದ ಸಹ ಪುರುಷ ಪಾತ್ರದೊಡನೆ ಒಪ್ಪಿಕೊಳ್ಳುವಾಗ, ನನಗೆ ಭೇದಿಯಾಗುವ ಸೂಕ್ಷ್ಮತೆ ಗೊತ್ತಾಗುತ್ತಿದೆ ಎಂದು ಕಣ್ಣುಮುಚ್ಚಿ, ಅವಳ ಎಲ್ಲಾ ಶಕ್ತಿಯನ್ನು ಸಂಗ್ರಹಿಸಿ ಅಂತಿಮವಾಗಿ ಬಹಿರಂಗಪಡಿಸುವಾಗ ನನಗೆ ಮನಸಾರೆ ಶ್ಲಾಘಿಸುವ ಭಾವವುಂಟಾಯಿತು.

ನಮ್ಮ ನ್ಯೂನ್ಯತೆಗಳನ್ನು ಸ್ವೀಕರಿಸಲು ಮತ್ತು ಅಪ್ಪಿಕೊಳ್ಳಲು ಧೈರ್ಯ ಬೇಕಾಗುತ್ತದೆ. ಎಷ್ಟೋ ಸಲಹ ಈ ರೀತಿಯ ಧೈರ್ಯವನ್ನು ತೋರಿಸುವಾಗ ನಾಚಿಕೆಪಟ್ಟುಕೊಳ್ಳುವ ಪರಿಸ್ಥಿತಿ ಎದುರುಗೊಂಡಿರುತ್ತೇವೆ. ನಮ್ಮನ್ನು ಸುಳ್ಳುಗಾರರೆಂದು ನಿಂದನೀಯವಾಗಿ ಅವಮಾನಿಸಲಾಗುತ್ತದೆ. ಇದೆಲ್ಲವೂ ಎಷ್ಟೋ ಬಾರಿ ಮಾಡೋದು, ನಾವು ಯಾರನ್ನು ಉದ್ದೇಶಪೂರ್ವಕವಾಗಿ ಕ್ಷಮಿಸುತ್ತೇವೋ, ಏನೇ ತಪ್ಪು ಮಾಡಿದರೂ ಬಿಟ್ಟುಕೊಡದೆ ಮರೆತುಬಿಡುತ್ತೇವೋ ಆ ವ್ಯಕ್ತಿಗಳು. ಅವರ ಭಯಂಕರ ಸಾವಿರಾರು ಅಪರಾಧಗಳನ್ನು ಗಮನದಲ್ಲಿಡದೆ ಮರೆಮಾಚಿ, ಎಲ್ಲಾ ರೀತಿಯ ಬೆದರಿಕೆ ಮತ್ತು ಹಿಂಸೆಯ ಬಲಿಪಶುವಾದದ್ದು ವಿಪರೀತ ನೋವನ್ನುಂಟು ಮಾಡುತ್ತದೆ. ನಾವು ತೆಗೆದುಕೊಳ್ಳುವ ಪ್ರತಿ ಉಸಿರಿನಲ್ಲೂ ವೇದನೆಯಿರುತ್ತದೆ. ಅಂತಹ ವ್ಯಕ್ತಿಗಳಿಗೆ ಒಳಗಾಗುವ ಪ್ರತಿಯೊಂದು ಚಿಂತನೆಯಲ್ಲೂ ಅಸಹ್ಯವಿದೆ, ಅದೂ ಕೂಡ ಈ ಬರಹದ ಹಿಂದಿನ ಕಾರಣಗಳು ತಿಳಿಯದೆ. ಇಂತೆಲ್ಲ ಅನುಭವಗಳೊಂದಿಗೆ ನಾನು ಮೊದಲಿಗಿಂತಲೂ ಬಲವಾದದ್ದು ಖುಷಿಯ ಸಂಗತಿ.

ಈ ಸಮಯ ನಾವು ಕಲ್ಪಿಸಿಕೊಳ್ಳಬಹುದಾದದ್ದಕ್ಕಿಂತ ಮಿತಿ ಮೀರಿದ ಕೆಟ್ಟ ಸಮಯ. ಮಕ್ಕಳು ಅತ್ಯಾಚಾರ ಮತ್ತು ಕೊಲೆಗೆ ಗುರಿಯಾಗುವುದು, ಹಾಗಂತ ಈ ಘಟನೆಗಳು ಮೊದಲು ಸಂಭವಿಸುತ್ತಿವೆ ಅಂತಲ್ಲ. ಆದರೆ ಈ ಪಾಮರತೆ, ಅಸಭ್ಯತೆಯ ಸಾಮಾನ್ಯೀಕರಣ ನನಗೆ ಭೀತಿ ಉಂಟಾಗಲು ಕಾರಣವಾಗಿದೆ. ನಾನು ಆರಂಭಿಸಿದ ವಿಷಯದಿಂದ ದಾರಿ ತಪ್ಪಿರುವೆ ಎಂಬ ಅರಿವು ನನಗಿದೆ. ಆದರೆ ಇಂತಹ ವಿಚಾರಗಳ ಬಗ್ಗೆ ಯೋಚಿಸುವಾಗ ನನ್ನನ್ನೇ ನಾನು ಕಳೆದುಕೊಳ್ಳುವೆ ಮತ್ತು ಆಳವಾಗಿ ದುಃಖಿತನಾಗುವೆ.

ಈ ರೀತಿಯ ನಿಂದನೆಯ ಪ್ರತ್ಯೇಕ ಮತ್ತು ಅನುಕೂಲಕರ ವ್ಯಾಖ್ಯಾನಗಳನ್ನು ತಿಳಿಸುವುದು ಅವಶ್ಯಕ. ಪ್ರತಿಯೊಬ್ಬರೂ ವಿಭಿನ್ನ ಅಭಿಪ್ರಾಯ ಅಥವಾ ವಿಭಿನ್ನ ನ್ಯೂನ್ಯತೆಗಳನ್ನು ಹೊಂದಿರಬಹುದು. ಆದರೆ ಯಾವುದೇ ನ್ಯೂನ್ಯತೆಯು ದೈಹಿಕ, ಸಾಮಾಜಿಕ ಮತ್ತು ಮಾನಸಿಕ ನಿಂದನೆಯನ್ನು ಸಮರ್ಥಿಸುವುದಿಲ್ಲ. ಹಿಂಸಾತ್ಮಕ ಪ್ರವೃತ್ತಿಗಳು, ಖಾಸಗಿಯಾಗಿ ಅಥವಾ ಬಹಿರಂಗವಾಗಿ ಕೆನ್ನೆಗೆ ಬಾರಿಸುವುದು, ತಮ್ಮ ವೈಯಕ್ತಿಕ ಸಂತೋಷಕ್ಕಾಗಿ ಹಿಮ್ಮುರಿ ಕಟ್ಟುವುದು, ಸಾರ್ವಜನಿಕವಾಗಿ ಇನ್ನೊಬ್ಬರ ಮೇಲೆ ಬೀಳುವುದು (ಸ್ನೇಹಿತರು ಕೂಡ), ಇನ್ನು ಹಲವನ್ನು ಅಸಂಬದ್ಧ ವಿಚಾರಗಳಿಂದ ಸಮರ್ಥಿಸುವ ಮೂಲವನ್ನು ದೈಹಿಕ ಮತ್ತು ಸಾಮಾಜಿಕ ದುರ್ಬಳಕೆ, ಪಿತೂರಿ ಮಾಡುವ, ಅಪಖ್ಯಾತಿ ತರುವ ಅಥವಾ ಮಾನನಷ್ಟ ಮಾಡುವ, ಹುಡುಗಾಟದ ನಮೂನೆಗಳನ್ನಾಗಿ ಪರಿಗಣಿಸಬೇಕು.

ಮತ್ತೊಬ್ಬರ ಆಪ್ತ ಬಳಗವನ್ನು ತಮ್ಮ ಅನುಕೂಲತೆಗೆ ತೆಗೆದುಕೊಂಡು ಅವರ ಘನತೆ ಹಾಳು ಮಾಡುವುದು, ಅವರ ಆರೋಗ್ಯವನ್ನು ಕ್ಷುಲ್ಲಕಗೊಳಿಸುವುದು ಅಥವಾ ಅವರ ಸಮಸ್ಯೆಗಳನ್ನು, ಜೊತೆಗೆ ಶಿಕ್ಷಣವನ್ನು ಅವಮಾನಿಸುವುದು, ಹೀಗೆ ಇವೆಲ್ಲವನ್ನು ಮಾನಸಿಕ ನಿಂದನೆಯ ಮಾದರಿಗಳಂತೆ ನೋಡಬೇಕು, ಮತ್ತು ಅದನ್ನು ಸ್ಪಷ್ಟಪಡಿಸಬೇಕಾಗಿದೆ. ಇವೆಲ್ಲವೂ ನ್ಯೂನ್ಯತೆಗಳಲ್ಲ, ಆದರೆ ಕ್ಷಮಿಸಲಾರದಂತಹ ಅಪರಾಧಗಳು ಮತ್ತು ಎಲ್ಲರ ಗಮನಕ್ಕೆ ತಂದು ಯಾವುದೇ ರೀತಿಯ ಹುಸಿ ಸಂಬಂಧ, ಸಂಘಟನೆ, ಸ್ನೇಹ ಬಳಗ ಮತ್ತು ಎಲ್ಲೆಲ್ಲಾ ಸಾಧ್ಯವೋ ಅಲ್ಲಿ ಇವುಗಳ ವಿರುದ್ಧ ಹೋರಾಡಬೇಕು.

ಎಲ್ಲಕಿಂತ ಹೆಚ್ಚಾಗಿ, ಪ್ರಗತಿಪರ, ವಿಕಸನ, ಸ್ತ್ರೀವಾದಿ ಮತ್ತು ಕ್ರಿಯವಾದದಿಂದ ಉತ್ಸಾಹ ಚಾಲಿತ ಜನರು ಮೊದಲು ಮತ್ತು ಅಗ್ರಗಣ್ಯವಾಗಿ ತಮ್ಮ ಸ್ವಂತ ಅಭಿಪ್ರಾಯಗಳ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಬೇಕು ಮತ್ತು ತಮ್ಮ ಕ್ರಿಯೆಗಳಿಂದ ಅವು ವಿರುದ್ಧವಾಗಿರಬಾರದು. ತಮ್ಮನ್ನು ತಾವು ಹಾಗೆ-ಹೀಗೆ ಅಂತೆಲ್ಲಾ ತೋರ್ಪಡಿಸುವುದನ್ನು ಬಿಟ್ಟು, ತಾವು ಒಳ್ಳೆಯ ಪತ್ರಕರ್ತ ಅಥವಾ ಕಾರ್ಯಕರ್ತರಾಗಿದ್ದರೆ ಅಥವಾ ಇನ್ನೇನೋ ಆಗಿದ್ದರೂ, ಅದನ್ನು ಜನರು ನಿರ್ಧರಿಸಲು ಬಿಡಬೇಕು. ಇಲ್ಲದಿದ್ದರೆ ಆ ರೀತಿಯ ವರ್ತನೆ ದೇಶದಲ್ಲಿ ಇಂದು ಪ್ರಚಲಿತವಾಗಿರುವ ಸ್ವಯಂ-ಶೈಲಿಯ ದೇವತಾಮನುಷ್ಯರ ಪ್ರವೃತ್ತಿಯನ್ನು ಹೋಲುತ್ತದೆ. ಗಾಡವಲ್ಲದಿರುವಿಕೆ, ದ್ವಿಬದಿಯ ನಡವಳಿಕೆ, ಒಳ ರಾಜಕರಣ, ಸೂಕ್ಷ್ಮವ್ಯತ್ಯಾಸದ ಕಡೆಗೆ ಅಸೂಕ್ಷ್ಮ ಭಾವ ಅಥವಾ ಸಣ್ಣ ದೃಷ್ಟಿಕೋನ, ನನ್ನಲ್ಲಿ ವಿಪರೀತವಾದ ಅಸಹ್ಯ ಹುಟ್ಟಿಸಿ, ಅತಿಗಾಬರಿಗೊಳಿಸುತ್ತದೆ.

ದಿನಗಳು ಉರುಳಿದಂತೆ ಈ ನ್ಯೂನ್ಯತೆಗಳನ್ನು ಸ್ವಾವಲೋಕನ ಮಾಡಿಕೊಂಡು, ಅಂತಹ ನಿಂದನೆಗಳ ವಿರುದ್ಧ ರಕ್ಷಣಾವ್ಯವಸ್ತೆ ಮಾಡಿಕೊಳ್ಳುತ್ತೇನೆ. ಆ ರೀತಿಯ ನಿಂದನೆಯ ದುರುಪಯೋಗದ ಬಲಿಪಶುವಾಗಿ ಆ ದಾರಿಯಲ್ಲಿ ನಡೆಯದೆಯಿರುವುದು ನಿಖರವಾದ ಜಾಗೃತೆಯನ್ನು ತೆಗೆದುಕೊಳ್ಳುತ್ತದೆ. ಆದರೆ ಹೌದು! ನಾನು ಈ ಪರಿಶ್ರಮವನ್ನು  ತೆಗೆದುಕೊಳ್ಳಬೇಕು, ಮತ್ತು ನಾವೆಲ್ಲರೂ ಇದನ್ನು ಮಾಡಬೇಕು.

ಗೌರವವು ಒಳಗಿನಿಂದ ಬರುವಂತದ್ದು. ನಮ್ಮ ಕ್ರಿಯೆ-ಕಾರ್ಯಗಳಿಂದ ಗಲಿಸಲ್ಪಡುವುದು. ಬಲವಂತದಿಂದಲ್ಲ ಅಥವಾ ಶಕ್ತಿ ತೋರ್ಪಡುವಿಕೆಯಿಂದಲ್ಲ. ಪ್ರೀತಿಯೆನ್ನುವುದು ಕ್ರಿಯಾಪದ; ಅದು ಅನೇಕ ಭರವಸೆಯನ್ನು ಸೂಚಿಸುತ್ತದೆ. ಆದರೆ ಇಂದು ಯಾರಾದರೂ ಪ್ರಾಮಾಣಿಕವಾಗಿ ಮತ್ತೊಬ್ಬರನ್ನು ಪ್ರೀತಿಸುವುದನ್ನು ನೋಡಲು ಅಪರೂಪ ಮತ್ತು ಅಸಾಧ್ಯವೆಂದು ನನಗೆ ಭಾವಿಸುತ್ತದೆ, ನನ್ನಿಂದ ಕೂಡ. ನಾನು ಮೃಗಗಳ ಸಮಾಜದಲ್ಲಿ ಬದುಕುತ್ತಿರುವಂತೆ ಭಾಸವಾಗುತ್ತದೆ. ಎಷ್ಟೋ ಬಾರಿ ನಾನು ಕಂಡಂತಹ ವಿವೇಚನೆಯಿಲ್ಲದ ಕೆಟ್ಟ ಮನುಷ್ಯರನ್ನು ನೋಡಿದಾಗ,  ಮೃಗಗಳು ಇವರುಗಳಿಗಿಂತ ಉತ್ತಮವಾಗಿ ಬದುಕುತ್ತವೇನೋ ಎಂದೆನಿಸುತ್ತದೆ.

ನಾನು ಮಾಡಿದ ಅಪರಾಧಗಳ ಬಗ್ಗೆ ನಾನು ಸುಲಭವಾಗಿ ಶರಣಾಗಬಹುದು ಮತ್ತು ನಾನಾಗುತ್ತೇನೆ ಕೂಡ. ನಾನು ದೋಷಪೂರಿತ ವ್ಯಕ್ತಿ, ದೋಷಪೂರಿತ ಮಗ/ಸಹೋದರ/ಸ್ನೇಹಿತ, ದೋಷಪೂರಿತ ಪ್ರೇಮಿ, ದೋಷಪೂರಿತ ಬರಹಗಾರ, ದೋಷಪೂರಿತ ಕೆಲಸಗಾರ ಮತ್ತು ಹಲವು. ನಾನು ಒಪ್ಪುತ್ತೇನೆ. ನಾನು ಇದನ್ನು ಅಪ್ಪಿಕೊಳ್ಳುತ್ತೇನೆ. ನನ್ನ ಈ ಅಪರಿಪೂರ್ಣತೆಗಳ ಸ್ವೀಕೃತಿಯ ಬಗ್ಗೆ ನನಗೆ ಹೆಮ್ಮೆಯೆನಿಸುತ್ತದೆ. ನನ್ನ ಹಾದಿ ಕೊನೆಯಿಲ್ಲದ್ದು, ನಾನು ಅದನ್ನು ಅಧ್ಯಾತ್ಮಿಕತೆ ಮತ್ತು ಸಾವಿರಾರು ಮೈಲುಗಳ ಪ್ರಯಾಣದ ಅನುಚ್ಛೇದದ ಸಹಕಾರದಿಂದ ಪ್ರವಹಿಸುತ್ತೇನೆ. ಯಾರೂ, ಸುಮ್ಮನೆ ಯಾರೂ ಅದನ್ನು ಕಲುಷಿತಗೊಳಿಸಲಾಗದು.

ಇಂತಿ ನಿಮ್ಮವ; @ Triple K 🙂

 

ಎಲ್ಲರೊಳಗಿರುವ ಕಲಿಯುಗದ ಭಗೀರಥನ ಆತ್ಮಾವಲೋಕನ..,

ನಮಾಮಿ ಗಂಗೇ ತವ ಪಾದಪಂಕಜಂ ಸುರಾಸುರೈರ್ವಂದಿತದಿವ್ಯರೂಪಾಮ್ |
ಭುಕ್ತಿಂ ಚ ಮುಕ್ತಿಂ ಚ ದದಾಸಿ ನಿತ್ಯಂ ಭಾವಾನುಸಾರೇಣ ಸದಾ ನರಾಣಾಮ್ ||

ಮೇಲಿನ ಸ್ತೋತ್ರದ ಅರ್ಥ :
ಸರ್ವ ಐಹಿಕ ಸುಖ, ಭೋಗಗಳು ಮತ್ತು ಮೋಕ್ಷವನ್ನು ಪ್ರದಾನಿಸುವ ಹೇ ಗಂಗಾಮಾತೇ, ನಿನ್ನ ಚರಣಕಮಲಗಳು ಅವರವರ ಭಾವಾನುಸಾರ ಸರ್ವ ದೇವ ಮತ್ತು ದೈತ್ಯರಿಗೆ ವಂದನೀಯವಾಗಿವೆ, ಅಂತಹ ನಿನ್ನ ಚರಣಗಳಲ್ಲಿ ನಾನು ವಂದಿಸುತ್ತೇನೆ.

1200px-Bhagirathi_River_at_Gangotri
ಗಂಗೋತ್ರಿಯಲ್ಲಿ ಭಾಗೀರಥಿ. ಚಿತ್ರ ಕೃಪೆ: ವಿಕಿಪೀಡಿಯ.

ಜೀವನ ನಿಂತ ನೀರಲ್ಲ. ಅದು ಮುಂದೆ ಸಾಗುವ ಹರಿಯುವ ನದಿ ಇದ್ದಂತೆ. ನೀರ್ ಬಗ್ಗೆ ಯಾಕ್ ಹೇಳ್ತೀನಿ ಅಂದ್ರೆ, ಜೀವನದ ಬಹುಪಾಲು ಭಾಗವನ್ನ ನೀರಿಗೆ ಹೋಲಿಸಬಹುದು. ಅದು ಪರೋಕ್ಷವಾಗಿ ನದಿಯಂತೆಯೇ. ಅದರ ಹರಿವು, ಮನುಷ್ಯನ ಜೀವನಕ್ರಮ ಒಂದೇ ನಾಣ್ಯದ ಎರಡು ಮುಖಗಳು.

ಮನುಷ್ಯನಿಗೆಷ್ಟು ಮೋಹ!! ಹಾಗೆಯೇ ನದಿಗೆಷ್ಟು ಧಾವಂತ!? ದಾರಿ ತೋರಿದ ಕಡೆ ಓಡಲೋ?, ಇಲ್ಲ ಮಧ್ಯದಲ್ಲೇ  ಇಲ್ಲೇ ಎಲ್ಲಾದರೂ ತನ್ನ ಪಯಣ ಕೊನೆಗೊಳಿಸಲೋ? ಇದ್ದರೂ ಎಲ್ಲಿರುವುದು? ಎಲ್ಲಿ ನೆಲೆ ನಿಲ್ಲುವುದು? ನಿಂತರೂ ಸಾರ್ಥಕ್ಯವಾಗುವೆನಾ? ಇಲ್ಲ ನಿಂತು ಸಾಮಾನ್ಯರಲ್ಲಿ ಸಾಮಾನ್ಯವಾಗಿ ತನ್ನ ಯಾತ್ರೆಯನ್ನ ಮುಗಿಸಿಬಿಡುವೆನಾ?! ಅನ್ನೋ ಹಿಂಜರಿಕೆ.

ಯಾಕೆಂದರೆ, ಭಾಗೀರಥಿಯಾಗಿ ಬಂದವಳು ಗಂಗೆಯನ್ನು ಸೇರಿ ಅವಳಷ್ಟೇ ಪವಿತ್ರಳಾಗಬೇಕೆಂಬ ಆಸೆ.

(ಟಿಪ್ಪಣಿ: ಗಂಗೋತ್ರಿ ಗಂಗಾ ನದಿಯ ಉಗಮಸ್ಥಾನ. ಇಲ್ಲಿ ಗಂಗೆಯು ಭಾಗೀರಥಿ ಎಂಬ ಹೆಸರಿನಿಂದ ಕರೆಯಿಸಿಕೊಳ್ಳುವಳು. ಮುಂದೆ ದೇವಪ್ರಯಾಗದಲ್ಲಿ ಅಲಕನಂದಾ ನದಿಯೊಂದಿಗೆ ಸಂಗಮಿಸಿದ ನಂತರ ನದಿಗೆ ಗಂಗಾ ಎಂಬ ನಾಮಧೇಯ.)

AjitHota_BirthPlaceOfGanges
ದೇವಪ್ರಯಾಗದಲ್ಲಿ ಅಲಕನ೦ದಾ ಮತ್ತು ಭಾಗಿರಥಿಯರ ಸಂಗಮ

ಹೌದಲ್ವಾ! ಏನೋ ಆಗಬೇಕೆಂದು ಬಯಸಿರ್ತೀವಿ. ಆದರೆ ಸೋಮಾರಿತನನೋ, ಇಲ್ಲ ಉಡಾಫೆಯ ಮನಸ್ಥಿತಿಯೋ, ಇಲ್ಲ ಇಷ್ಟು ಸಾಕು ಎನ್ನುವ so called “COMFORT ZONE” ಮುಟ್ಟಿದ್ದೇವೆ ಅನ್ನೋ ಧೋರಣೆಯೋ; ನಮ್ಮನ್ನ ನಿಂತ ನೀರಾಗಿ ನಿಲ್ಲಿಸಿಬಿಡುತ್ತೆ. ಯಾಕಂದ್ರೆ ನಿಂತ ನೀರು ಹರಿಯುವ ಉತ್ಸಾಹವನ್ನೇ ಕಳೆದುಕೊಂಡಿರುತಲ್ವಾ ಅದಕ್ಕೆ ;(

Matured Stage ಅಂತಾರಲ್ಲ ಅವಾಗ ಬದುಕು: ಕನಸು; ಸಾಧನೆಗಳ ಬಗ್ಗೆ ನಾವೇ ಏನ್ ಏನೋ ಬರೆದುಕೊಂಡಿರ್ತೀವಿ. ಅವು ಕಾಲಕ್ರಮೇಣ ಓದಲಾರದಷ್ಟು ಮಟ್ಟ ತಲುಪಿರ್ತೀವಿ. ಒಂದು ವಯಸ್ಸಾಗಿ ಕಣ್ಣು ಮಂಜಾಗಿರಬೇಕು; ಇಲ್ಲ ಅಂದ್ರೆ ಆ ಬರಹ ಧೂಳಿಡಿದು ಓದಲಿಕ್ಕೆ ಆಗಲಿಕ್ಕಿಲ್ಲ. ಅಂದ್ರೆ ನಾವು ನಮ್ಮ ಕನಸುಗಳನ್ನ ನನಸಾಗಿಸದೆ ಮೂಲೆ ಸೇರಿಸಿರ್ತೀವಿ ಅನ್ನೋದು! ನಾವ್ ಏನ್ ಆಗಬೇಕಿತ್ತು, ನಾವ್ ಏನ್ ಆಗಿದ್ದೀವಿ ಅಂತ ಪಶ್ಚಾತ್ತಾಪ ಪಡೋ ಸಮಯ 🙂

ಈಗ ಏನ್ ಆಗಿದ್ದೀವಿ!? ಮುಂದೇನಾಯಿತು? ಆಗಿದ್ದಕ್ಕೆ ಪಶ್ಚಾತ್ತಾಪಪಟ್ಟುಕೊಂಡು ಕಾಲ ಕಳೆಯೋದರಲ್ಲಿ ಯಾವುದೇ ಪ್ರಯೋಜನವಿಲ್ಲ. ಅಂದುಕೊಂಡಿದ್ದು ಮಾಡಲೇಬೇಕು, ಆಗುವವರೆಗೂ ದಣಿಯಲೇಬೇಕು. ಕಂಡ  ಕನಸುಗಳನ್ನ ಸಾಕಾರಗೊಳಿಸಲೇಬೇಕು, ರಾತ್ರಿ ಹಗಲು ಸುಟ್ಟು ಸಾಧಿಸಲೇಬೇಕು; ಸಮಯ ಮೀರುವುದೊಳಗಾಗಿ. 🙂

ಹೌದಲ್ವಾ? ಬದುಕಲೇಬೇಕು ಸಾರ್ಥಕವಾಗಿ, ನಾವು ಬಯಸಿದ ಬದುಕು ನಮ್ಮದಾಗಲೇಬೇಕು! ಉತ್ಸಾಹದಿಂದ ಓಡುವ, ಹರಿಯುವ ನದಿಯಂತೆ; ಭಾಗೀರಥಿಯಾಗಿ ಬಂದವಳು ಗಂಗೆಯಾದಂತೆ. ಅಷ್ಟು ದೂರದ ಉದಾಹರಣೆ ಬೇಡ ಅಂದ್ರೆ ನಮ್ಮ ಕನ್ನಿಕೆಯನ್ನೇ ತೆಗೆದುಕೊಳ್ಳೋಣ, ಆಕೆ ಕಾವೇರಿಯಾಗ ಬಯಸುತ್ತಾಳೆ 🙂

ತ್ರಿವೇಣಿ ಸಂಗಮ, ಭಾಗಮಂಡಲ, ಕೊಡಗು ಜಿಲ್ಲೆ, ಕರ್ನಾಟಕ

pic-20-Triveni-Sangama-Bhagamandala
ತ್ರಿವೇಣಿ ಸಂಗಮ, ಭಾಗಮಂಡಲ, ಕೊಡಗು ಜಿಲ್ಲೆ, ಕರ್ನಾಟಕ

ಎಷ್ಟು ಜೀವನ ಪಾಠ ಕೊಡುತ್ತೆ ಅಲ್ವೇ ನಮ್ಮ ಜೀವಜಲ! ಮನುಷ್ಯ ಅನ್ನುವುದು, ನಿಜವಾಗಿಯೂ ಒ೦ದು ಜೀವ, ಅದು ನಿರ೦ತರವಾಗಿ ವಿಕಾಸಗೊಳ್ಳುತ್ತಾ ಮು೦ದುವರೆಯುತ್ತಿರಬೇಕು. ಕೆಲವೊ೦ದು ಅನುಭವದ ಜ್ಞಾನ ಸಿಗುವುದು, ಈ ಮಾನವನ ದೇಹದಲ್ಲಿ. ಹಾಗಾಗಿ ಆತ್ಮ ಜೀವ ತಳೆಯುತ್ತದೆ. ಆತ್ಮಕ್ಕೆ ಈ ಜೀವನದಲ್ಲಿ ಏನೆಲ್ಲಾ ಕಲಿಯಲು ಇದೆ ಎನ್ನುವುದು ಚೆನ್ನಾಗಿ ಗೊತ್ತಿರುತ್ತದೆ, ಆದರೆ ಅದು ಹುಟ್ಟಿದ ತಕ್ಷಣ ಅದನ್ನೆಲ್ಲಾ ಮರೆತು, ಜೀವನದ ನಾಟಕ ರ೦ಗದಲ್ಲಿ ಸಿಕ್ಕುಹಾಕಿಕೊಳ್ಳುತ್ತದೆ. ಅಲ್ಲಿ೦ದ ಶುರು, ಕರ್ಮಖಾ೦ಡಗಳು, ಋಣ ತೀರಿಸುವುದಲ್ಲೇ ಕಾಲ ಹೋಗಿರುತ್ತದೆ. ಅದನ್ನೆಲ್ಲಾ ಬದಿಗೊತ್ತಿ, ನದಿ ತನ್ನ ಗುರಿ ತಲುಪಲು ಕಡಲ ಸೇರಲಿಕ್ಕೆ ಓಡುವ ಹಾಗೇ, ನಾವೂ ನಮ್ಮ ಗುರಿ ಮುಟ್ಟುವ ತನಕ ಉತ್ಸಾಹದಿಂದ ಸಾಗೋಣ 🙂

ಇಷ್ಟೆಲ್ಲಾ ಅನ್ನಿಸಿದ್ದು ನಾನೂ ಕೂಡ ಮೇಲೆ ಹೇಳಿದ ಹಾಗೇ ಏನ್ ಏನೋ ಬರೆದುಕೊಂಡಿದ್ದೆ. ಆದ್ರೆ ಇವಾಗ ಕಾಣದಷ್ಟು ಧೂಳುಮಯವಾಗ  ಬಿಟ್ಟಿರಲಿಲ್ಲ. ಯಾವುದೋ ದಾರಿಯಲ್ಲಿ ಹೊರಟ್ಟಿದ್ದೆ, ಆದ್ರೆ ಹಿಂದೆ ಬರೆದದ್ದು ನೆನಪಾಯಿತು. ಅದಕ್ಕೆಂದೇ ಮತ್ತೆ ಧೂಳನೆಲ್ಲ ಕೊಡವಿ ಆ ಬರಹ ಓದಲು ಅಣಿಯಾದೆ; ಗುರಿ ಮುಟ್ಟುವ ತವಕದಲ್ಲಿ.

ಹೌದಲ್ವಾ!? ಇಂತದೇ ತಪ್ಪು ಎಲ್ಲರೂ ಮಾಡಿರ್ತೀವಲ್ಲ? ಎಲ್ಲರೂ ಅಲ್ಲದ್ದಿದ್ದರೂ ನನ್ನ ಜಾತಿಗೆ (ಅಂದ್ರೆ ಮನಸ್ಥಿತಿಯಲ್ಲಿ, ಯಾಕಂದ್ರೆ ನನ್ನದು ಭಾರತೀಯ ಜಾತಿ ಅಷ್ಟೇ) ಸೇರಿದವರಾದ್ರು ಮಾಡಿರ್ತೀರ 😛 ಅದಕ್ಕೆ ಗೀಚಿದ್ದೇನೆ, ಮತ್ತೆ ಧೂಳು ಕೊಡವಿಕೊಂಡು ಎದ್ರು  ಎದ್ದಾರು ಅಂತ 😉

ನಾನೂ ಅಷ್ಟೇ; ಭಾಗಿರಥಿಯಂತೆ ಗಂಗೆಯ ಸೇರಿ ಅವಳಷ್ಟೇ ಪವಿತ್ರಳಾಗಿ, ಕಡಲ ಸೇರುವ ತವಕದಲ್ಲಿದ್ದೇನೆ. ಸೇರೇ ತೀರುತ್ತೇನೆ ಅನ್ನೋ ಆತ್ಮವಿಶ್ವಾಸ ಸಿಕ್ಕಿದೆ, ಅದಕ್ಕಿಂತಾ ಹೆಚ್ಚಾಗಿ ನಾನೂ ತಂದುಕೊಂಡಿದ್ದೇನೆ. ಶುಭವಾಗಲಿ ಎಂದು ನೀವೂ ಬಯಸಿ, ಹಾರೈಸಿ. ನಾನೂ ಹಾರೈಸ್ತೀನಿ 🙂

ಇಂತಿ ನಿಮ್ಮವ;
@ Triple K 🙂

ಅನನ್ಯ ಚೇತನ; ಒಂದು ಮುನ್ನುಡಿ

ಅನನ್ಯ ಚೇತನ

ಸಾವಿರಾರು ಮೈಲುಗಳ ಪಯಣದ ಅನುಚ್ಛೇದ; ಸಂಸ್ಕೃತಿ, ಭಾರತೀಯತೆಯ ಅನಭಿಷಿಕ್ತ ಉಸಿರು, ಪರಿಪಕ್ವತೆಯ “ಅನನ್ಯ ಚೇತನ”.

ಅದರ ಕಲ್ಪನೆಯೂ ಅದೆಷ್ಟು ಬೆಡಗಿನದೋ, ಭವ್ಯವೋ, ಅದನ್ನು ನೋಡಿದ ಮೇಲೆಯೇ ಅನಿಸಿದ್ದು, ತಿಳಿದ್ದದ್ದೆಲ್ಲ ಸತ್ಯವೆನಿಸುತ್ತಿದೆ. ಸಾವಿರಾರು ಜನರ, ಸಾವಿರಾರು ಮೈಲುಗಳ, ಸಾವಿರಾರು ಬಗೆಗಳಿಂದ ಅಳಿಸಿ, ಉಳಿಸಿದ ಅಮೂರ್ತವಾದ ರೂಪವೇ ಅದಾಗಿತ್ತು ಎನ್ನುವುದರಲ್ಲಿ ಸಂಶಯವೇ ಬೇಡ. 😉

ನೈಜ ಕಥೆಗಳೋ, ನಡೆದ ಘಟನೆಗಳೋ, ಇಲ್ಲ ಕಟು ವಾಸ್ತವವೋ!? ಯಾವುದೆಂದು ನಾ ಹೇಳಲಿ? ಯಾವುದಕ್ಕೆ ಯಾವ ರೂಪ ಕೊಡಬೇಕೋ ಅನ್ನುವುದು ತಿಳಿಯದ್ದಿದ್ದಾಗ ಆವರಿಸಿದ ನೆನಪುಗಳ ಛಾಯೆಯಿಂದ ನೈಜತೆಗೆ ತುಸುವೇ ಹತ್ತಿರದ ದಾರಿಯಲ್ಲಿ ಕೊಂಡೊಯ್ಯುತ್ತಿದ್ದೇನೆ. ಅವುಗಳ ಜಾಡು ಹಿಡಿದು ಹೊರಟಾಗ ಎಲ್ಲಾ ವಾಸ್ತವಕ್ಕೆ ಹತ್ತಿರವಾದವೇ!, ಏಕೆಂದರೆ ಎಲ್ಲವೂ ನನ್ನ ನೆನಪಿನ ಹಾಯ ದೋಣಿಯಿಂದ ಹೆಕ್ಕಿ ತೆಗೆದವು.

ಕಾವೇರಿಯ ಝುಳು ಝುಳು ನಿನಾದವೋ, ಶರಾವತಿಯ ಭೋರ್ಗರೆತವೋ, ನೇತ್ರಾವತಿಯ ವಿಹಂಗಮ ನೋಟವೋ, ತುಂಗಭದ್ರೆಯ ತವರಿನ ಸಂಪ್ರೀತಿಯೋ, ವರದೆಯ ಮೇಲಿನ ಅಜ್ಜನ ಬಕುತಿಯೋ, ಮಾಂಡೋವಿಯ ವಿಶಾಲತೆಯೋ, ಕಾರವಾರದಿಂದ ಮಂಗಳಾರದವರೆಗೆ ಜೊತೆಯಾದ ಅಣ್ಣನ ನಿಷ್ಕಲ್ಮಶ ಮಾತುಗಳೋ, ಧನುಷ್ಕೋಡಿಯ ಅಂದವೋ!! ಹುಹ್ ನಾ ಯಾವುದೆಂದು ಹೇಳಲಿ??!! 🙂

ಸಂದೇಹವೇ ಇಲ್ಲ, ಪ್ರತಿ ಹೆಜ್ಜೆಯ ಚಿತ್ರಣ ನನಗೆ ತೋಚಿದ ಹಾಗೆ, ನಾ ಕಂಡಂತೆ ಗೀಚಿದ್ದೇನೆ; ಸಂಸ್ಕೃತಿಯ ಬೆನ್ನು ಹತ್ತಿ, ಎಲ್ಲಕ್ಕಿಂತಾ ಮಿಗಿಲಾಗಿ ಭಾರತೀಯತೆಯ ಜಾಡು ಹಿಡಿದು, ಅದರ ಅಂದ ಚಂದ, ಭವ್ಯ ರೂಪತೆಯ ಕಲ್ಪನೆಯ ಸಾಕಾರದೊಂದಿಗೆ.

ಪರಿಪೂರ್ಣವಾಗಿ ಅಲ್ಲದ್ದಿದ್ದರೂ, ಸಾವಿರಾರು ಎಂಬ ಪದಕ್ಕೆ ಸಂಪೂರ್ಣ ಅರ್ಥವಿದೆ. ಅದಕ್ಕೋಸ್ಕರವೇ ಈ ಅಭಿಯಾನ. ನೀವೂ ಜೊತೆಯಾಗಿ. 🙂

Greater than the mother bearing child Greater than the child that is born Every breath is ಭಾರತ (Bharata) Every word is ಭಾರತ (Bharata).

In every place, in all the world As far as our rivers  water flow Your name will stand- ಭಾರತ (Bharata) Your name; Though written on water, Will always stand.

They said it, I too felt PROUD about it along with you all 🙂

Will Durant, American Historian: “India was the motherland of our race, and Sanskrit the mother of Europe’s languages: she was the mother of our philosophy; mother, through the Arabs, of much of our mathematics; mother, through the Buddha, of the ideals embodied in Christianity; mother, through the village community, of self-government and democracy. Mother India is in many ways the mother of us all”.

Mark Twain, American Author: “India is the cradle of the human race, the birthplace of human speech, the mother of history, the grandmother of legend, and the great grandmother of tradition. Our most valuable and most instructive materials in the history of man are treasured up in India only.”

Albert Einstein, American Scientist: “We owe a lot to the Indians, who taught us how to count, without which no worthwhile scientific discovery could have been made.”

Max Mueller, German Scholar: If I were asked under what sky the human mind has most fully developed some of its choicest gifts, has most deeply pondered on the greatest problems of life, and has found solutions, I should point to India.

Romain Rolland, French Scholar: “If there is one place on the face of earth where all the dreams of living men have found a home from the very earliest days when man began the dream of existence, it is India.”

Henry David Thoreau, American Thinker & Author: Whenever I have read any part of the Vedas, I have felt that some unearthly and unknown light illuminated me. In the great teaching of the Vedas, there is no touch of sectarianism. It is of all ages, climbs, and nationalities and is the royal road for the attainment of the Great Knowledge. When I read it, I feel that I am under the spangled heavens of a summer night.

R.W. Emerson, American Author: In the great books of India, an empire spoke to us, nothing small or unworthy, but large, serene, consistent, the voice of an old intelligence, which in another age and climate had pondered and thus disposed of the questions that exercise us.

Hu Shih, former Ambassador of China to USA: “India conquered and dominated China culturally for 20 centuries without ever having to send a single soldier across her border.”

Keith Bellows, National Geographic Society: “There are some parts of the world that, once visited, get into your heart and won’t go. For me, India is such a place. When I first visited, I was stunned by the richness of the land, by its lush beauty and exotic architecture, by its ability to overload the senses with the pure, concentrated intensity of its colors, smells, tastes, and sounds… I had been seeing the world in black & white and, when brought face-to-face with India, experienced everything re-rendered in brilliant Technicolor.”

A Rough Guide to India: “It is impossible not to be astonished by India. Nowhere on Earth does humanity present itself in such a dizzying, creative burst of cultures and religions, races and tongues. Enriched by successive waves of migration and marauders from distant lands, every one of them left an indelible imprint which was absorbed into the Indian way of life. Every aspect of the country presents itself on a massive, exaggerated scale, worthy in comparison only to the superlative mountains that overshadow it. It is this variety which provides a breathtaking ensemble for experiences that is uniquely Indian. Perhaps the only thing more difficult than to be indifferent to India would be to describe or understand India completely. There are perhaps very few nations in the world with the enormous variety that India has to offer. Modern day India represents the largest democracy in the world with a seamless picture of unity in diversity unparalleled anywhere else.”

Mark Twain,  American Author: “So far as I am able to judge, nothing has been left undone, either by man or nature, to make India the most extraordinary country that the sun visits on his rounds. Nothing seems to have been forgotten, nothing overlooked.”

Will Durant, American Historian: “India will teach us the tolerance and gentleness of mature mind, understanding spirit and a unifying, pacifying love for all human beings.”

William James, American Author: “From the Vedas we learn a practical art of surgery, medicine, music, house building under which mechanized art is included. They are encyclopedia of every aspect of life, culture, religion, science, ethics, law, cosmology and meteorology.”

 Max Muller, German Scholar: “There is no book in the world that is so thrilling, stirring and inspiring as the Upanishads.” (‘Sacred Books of the East’)

Dr Arnold Toynbee, British Historian: “It is already becoming clear that a chapter which had a Western beginning will have to have an Indian ending if it is not to end in the self-destruction of the human race. At this supremely dangerous moment in history, the only way of salvation for mankind is the Indian way.”

Sir William Jones, British Orientalist: “The Sanskrit language, whatever be its antiquity is of wonderful structure, more perfect than the Greek, more copious than the Latin and more exquisitely refined than either.”

P. Johnstone: “Gravitation was known to the Hindus (Indians) before the birth of Newton. The system of blood circulation was discovered by them centuries before Harvey was heard of.”

Emmelin Plunret: “They were very advanced Hindu astronomers in 6000 BC. Vedas contain an account of the dimension of Earth, Sun, Moon, Planets and Galaxies.” (‘Calendars and Constellations’)

Sylvia Levi: “She (India) has left indelible imprints on one fourth of the human race in the course of a long succession of centuries. She has the right to reclaim … her place amongst the great nations summarizing and symbolizing the spirit of humanity. From Persia to the Chinese sea, from the icy regions of Siberia to Islands of Java and Borneo, India has propagated her beliefs, her tales, and her civilization!”

Schopenhauer: “Vedas are the most rewarding and the most elevating book which can be possible in the world.” (Works VI p.427)

Mark Twain, American Author: “India has two million gods, and worships them all. In religion all other countries are paupers; India is the only millionaire.”

Colonel James Todd: “Where can we look for sages like those whose systems of philosophy were prototypes of those of Greece: to whose works Plato, Thales and Pythagorus were disciples? Where do I find astronomers whose knowledge of planetary systems yet excites wonder in Europe as well as the architects and sculptors whose works claim our admiration, and the musicians who could make the mind oscillate from joy to sorrow, from tears to smile with the change of modes and varied intonation?”

Lancelot Hogben: “There has been no more revolutionary contribution than the one which the Hindus (Indians) made when they invented ZERO.” (‘Mathematics for the Millions’)

Wheeler Wilcox: “India – The land of Vedas, the remarkable works contain not only religious ideas for a perfect life, but also facts which science has proved true. Electricity, radium, electronics, airship, all were known to the seers who founded the Vedas.”

W. Heisenberg, German Physicist: “After the conversations about Indian philosophy, some of the ideas of Quantum Physics that had seemed so crazy suddenly made much more sense.”

Sir W. Hunter, British Surgeon: “The surgery of the ancient Indian physicians was bold and skillful. A special branch of surgery was dedicated to rhinoplasty or operations for improving deformed ears, noses and forming new ones, which European surgeons have now borrowed.”

Sir John Woodroffe: “An examination of Indian Vedic doctrines shows that it is in tune with the most advanced scientific and philosophical thought of the West.”

B.G. Rele:  “Our present knowledge of the nervous system fits in so accurately with the internal description of the human body given in the Vedas (5000 years ago). Then the question arises whether the Vedas are really religious books or books on anatomy of the nervous system and medicine.” (‘The Vedic Gods’)

Adolf Seilachar & P.K. Bose, scientists: “One Billion-Year-Old fossil prove life began in India: AFP Washington reports in Science Magazine that German Scientist Adolf Seilachar and Indian Scientist P.K. Bose have unearthed fossil in Churhat a town in Madhya Pradesh, India which is 1.1 billion years old and has rolled back the evolutionary clock by more than 500 million years.”

Will Durant, American Historian: “It is true that even across the Himalayan barrier India has sent to the west, such gifts as grammar and logic, philosophy and fables, hypnotism and chess, and above all numerals and the decimal system.”

ಇಂತಿ ನಿಮ್ಮವ; @ Triple K 🙂

ಪ್ರೀತಿಯ ಓಲೆ

ಪ್ರಜಾವಾಣಿ ಪತ್ರಿಕೆಯ ಫೆಬ್ರವರಿ ೧೪ರ ಪ್ರೇಮಿಗಳ ದಿನಾಚರಣೆಯ ಪ್ರಯುಕ್ತ ಆಯೋಜಿಸಿರುವ ಸ್ಪರ್ಧೆಗೆ “ಪ್ರೇಮ ಪತ್ರ” ಬರಿಬೇಕಂತೆ. ಅದಕ್ಕೋಸ್ಕರ ಈ ಓಲೆ. ಇಷ್ಟಪಡ್ತೀರ ಅನ್ಸುತೆ ಒಂದ್ ಬಾರಿ ಓದಿ Please 😛

ನಮಸ್ತೆ ಕಣ್ರೀ…

ಪ್ರೀತಿಯ ಆಲಿಂಗನ, ಅಭಿನಂದನಾಪೂರ್ವಕ ವಂದನೆ. ಹೇಗಿದ್ದೀರ? ಸದಾ ಕಾಲ ನಿಮ್ಮ ಸೌಖ್ಯ ಬಯಸುತ್ತಾ! 🙂

ಯಾರು ನೀವು?? ನನಗೂ ನಿಮಗೂ ಯಾವ ಕಾಲದ ಸಂಬಂಧ?? ನಾನು ಯಾಕೆ ನಿಮ್ಮ ಅತಿಯಾಗಿ ಹಚ್ಚಿಕೊಂಡಿದ್ದೇನೆ?? ನನಗೆ ತಿಳಿಯದ ಹಾಗೆ ನೀವು ನನಗೆ ಹೇಗೆ ಆತ್ಮೀಯಳಾದ್ರೀ?!! ಯಾವ ಊರು, ಏನು ಎತ್ತ, ಯಾವುದೂ ತಿಳಿಯದೆ ನನ್ನನೇಕೆ ಆವರಿಸಿದ್ದೀ?? ನಿಜ ಹೇಳ್ರಿ, ಯಾರ್ರೀ ನೀವು?? 😉

ಇವನಿಗೆನಾಗಿದೆ? ಯಾಕೆ! ಏನ್ ಇಷ್ಟೊಂದು ಏನ್ ಏನೋ ಮಾತಾಡುತ್ತಿದ್ದಾನಲ್ಲ ಅಂತ ಎಣಿಕೆ ಹಾಕಿರ್ತಿಯಾ ಆಲೆ ಅಲ್ವಾ?! ಹಮ್ ಇಷ್ಟಕ್ಕೆ ಹಿಂಗ್ ಅಂದ್ರೆ ಹೆಂಗೇ ಮಹಾರಾಯಿತೀ? ಮುಂದಕ್ಕೆ ಓದಿದರೆ ನಿಜಕ್ಕೂ ಆಶ್ಚರ್ಯಪಡ್ತೀಯ, ಪರಿಚಯವಾಗಿ ನಾಲ್ಕು ವರ್ಷವಾದರೂ ಒಂದೂ ಮಾತಾಡದ್ದಿದ್ದವನು ಇವತ್ತು ಏನ್ ಇಷ್ಟೊಂದು ಅಂತ!

ಕಾರಣ ಇದೆ ಕಣೇ ನನ್ನ ಗೆಳತಿ. ಬಹಳ ದಿನಗಳಿಂದ ನಿಂಗೆ ಪತ್ರ ಬರೀಬೇಕು ಅಂದುಕೊಂಡಾಗ ಕಾರಣಗಳ ಪಟ್ಟಿಯೇ ನನ್ನ ಮುಂದೆ ಬಂದವು. ಏಕೆಂದರೆ ನಿನ್ನ ಹತ್ತಿರ ಸಾವಿರ ಮಾತಾಡಬೇಕು ಎಂದು ನಾನು ಬಂದಾಗ, ಇತ್ತೀಚಿನ ನಿನ್ನ ಮುಗ್ದ ಮೌನ ನನ್ನನ್ನ ಮಾತಾಡುವುದಕ್ಕೆ ಬಿಡದೇ ಕಾಡುತ್ತದೆ. ಅದಕ್ಕೇ ಈ ಪತ್ರದ ಮೊರೆ ಹೊಕ್ಕಿದ್ದೇನೆ, ಎಲ್ಲವನ್ನೂ ಮಾತಿನಲ್ಲೇ ಹೇಳೋದಕ್ಕೆ ಕಷ್ಟವಾಗುವ ಕಾರಣ! 🙂

ಹೌದು ಕಣೇ, ಚಿಟ್ಟೆಯ ರಂಗಿನ ರೆಕ್ಕೆಯಂತಹ ಚಂಚಲ ಮನಸ್ಸು ನನ್ನದು. ಅದು ಹೇಗೆ ನಿನ್ನ ಕಣ್ಣ ಬೇಲಿಯ ಕಾವಲಿಗೆ ಸಿಕ್ಕಿ ಹೋದೆನೋ?! ಮೊದಲ ಹೆಜ್ಜೆಯ ಆಂಗಿಕದಲ್ಲೇ ನನ್ನ ಅಂತರಂಗವನ್ನು ಆವರಿಸಿಕೊಂಡ ಕಲಾಕೌತುಕದ ಸುರಭಿ ನೀನು. ಬದುಕಿನ ಭಾವದ ಪದರ ಪದರವನ್ನು ಚದುಚದುರಿಸಿ, ಬಿಡಿಬಿಡಿಸಿ ಭಾವದ ರಸತಾಳದ ಆಳದವರೆಗೂ ಕೊಂಡೊಯ್ದು ಪ್ರೀತಿಯ ಸಾಗರದಲ್ಲಿ ಮಜ್ಜನ ಮಾಡಿಸಿ, ಎದೆ ಭಾರ ಇಳಿಸಿ, ಹಗುರಾಗಿಸಿ ತೇಲಿಸುವ ಭಾವಯಾನ ನಿನ್ನ ಜೊತೆಯಾಗಿನ ಪಯಣ! 😛

ಆ ನಿನ್ನ ಕಣ್ಣು ಕಮಲ ಅರಳಿದಂತೆ, ನಗು ಬೆಳದಿಂಗಳಂತೆ, ಮಾತು ಮಂಜಿನ ಮಳೆಯಂತೆ, ವದನ ಹುಣ್ಣಿಮೆಯ ಚಂದ್ರನಂತೆ, ಆಂತರ್ಯ ಬೆಳದಿಂಗಳ ಹಾಲಿನಂತೆ, ನಡೆ ತಿಳಿ ಗಾಳಿಯ ತೇವ ಆತ್ಮ ತಾಕಿದಂತೆ, ಆ ಹಾವ-ಭಾವ ಹಾಲು-ಸಕ್ಕರೆ ಮೆಲ್ಲಿದಂತೆ!! ಮುಮ್ಮುಂದಿನದು ಭಾವ ಪ್ರವಾಹದ ಜೀವ ವೈಭವ:  ಅನಿರ್ವಚನೀಯವಾದ ಭಾವವನ್ನು ನನ್ನಲ್ಲಿ ಉಕ್ಕಿಸಿದ ಕಲಾಕಾರಂಜಿ; ನನ್ನ ಅಪರಂಜಿ ನೀನು… ನನ್ನನ್ನು ಕಾಡುವ ಪ್ರತಿಯೊಂದು ಪ್ರಶ್ನೆಗಳಿಗೂ ಆಹ್ಲಾದಕರವಾದ, ಭಾವಪೋಷಕವಾದ ಲಯಗಾರಿಕೆಯ ಸಮ್ಮೋಹಕವಾದ ಉತ್ತರ ನೀನೇ ಕಣೇ ನನ್ನ ಒಲವೇ! 🙂

ಆ ನಿನ್ನ ಮುಗುಳ್ನಗೆಯಿಂದ ಭಾವವು, ಭಾವದಿಂದ ಜೀವವೂ ನನ್ನಲ್ಲಿ ಅನ್ಯೋನ್ಯವಾಗಿ ಉತ್ ಸ್ಪೂರ್ತಗೊಂಡಿದೆ. ಆ ನಿನ್ನ ತನ್ಮಯತೆ ಸಮೃದ್ಧವಾದ ಅವಧಾನಶೀಲತೆ 🙂

ನೀನು ಸ್ಪೂರ್ತಿಯ ಚಿಲುಮೆ, ಭಾವನೆಗಳ ಮಿಲನ; ಪ್ರೀತಿ, ಪ್ರತಿಭೆ ಮತ್ತು ಸೌಂದರ್ಯದ ಸಮ್ಮಿಲನ, ಬದುಕಿನ ಭಾವಗಳ ಜೀವಂತ ಅಭಿವ್ಯಕ್ತಿ; ಚಿರಂತನ ಚೂತನವನ ಚೈತ್ರ; ಎಲ್ಲಕ್ಕಿಂತಾ ಮಿಗಿಲಾಗಿ ಚೈತನ್ಯ-ಶಾಂತಿಯ ಸಾಕ್ಷಾತ್ಕಾರ”

ಬತ್ತಿ ಹೋದ ಬಾವಿಯಂತಿದ್ದ ನನ್ನ ಬದುಕಿಗೆ, ನೀರಿಲ್ಲದ ಮೀನಿನಂತೆ ವಿಲವಿಲ ಒದ್ದಾಡುತಿದ್ದ ನನ್ನ ಮನಸಿಗೆ ಪ್ರೀತಿಯ ನೀರೆರೆದು ನನ್ನಲ್ಲಿ ನಿಜವಾದ ಜೀವನದ ಅರ್ಥವನ್ನು ಕಳಿಸಿದ ಗುರುವೂ ನೀನೇ. ಇಂತಿಪ್ಪ ಭಾವಗಳ ಅನಂತ ಯಾತ್ರೆಯಲ್ಲಿ ನನ್ನನ್ನು ಕರೆದೊಯ್ಯುವ ನಿನ್ನ ಕಣ್ಣಿನ ಭಾವಾಭಿವ್ಯಕ್ತಿಯ ಸಾಮರ್ಥ್ಯ ಮೊಗೆದಷ್ಟೂ ಜಿನುಗುವ ಅಂತರ್ಜಲ. ನನ್ನ ಜೀವಜಲ ಮತ್ತೆ ಆತ್ಮಬಲ. ಏಕೆಂದರೆ ಈ ಬದುಕೆಂಬ ಮರಳುಗಾಡಿನ ನನ್ನ ಓಯಾಸಿಸ್ ನೀನು ಕಣೇ!! 🙂

ಕಡಲಲ್ಲಿ ಹುಟ್ಟುವ ಅಲೆ ದಡ ದಾಟಲಾರದೆ ಅಸಹನೆಯಿಂದ ಕದಲುತ್ತಾ, ನಿಸ್ಸಹಾಯಕವಾಗಿ ವಾಪಸ್ಸ್ ಕಡಲಿನೊಳಗೆ ಲೀನವಾದಂತೆ, ನಾನು ಮತ್ತೆ ಮತ್ತೆ ನಿನ್ನ ನೆನಪುಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗೆಲ್ಲ ನಿನ್ನ ನೆನಪನ್ನುಂಡು, ನೆನಪ್ಪನ್ನೇ ಹಾಸಿ, ನೆನಪನ್ನೇ ಹೊದ್ದು ಮಲಗಿ, ನೆನಪುಗಳನ್ನೇ ಕನವರಿಸಿ ನೊಂದುಕೊಂಡಿದ್ದೇನೆ. ನಿನ್ನ ನೆನಪಿನಿಂದಲೇ ಬದುಕಲು ಕಲಿತಿದ್ದೇನೆ. ನಿನ್ನ ನೆನಪುಗಳಿಗೆ ನನ್ನ ಎದೆಯ ಅಂತರಂಗದ ಬಾಗಿಲು ಸದಾ ತೆರೆದುಬಿಟ್ಟಿದ್ದೇನೆ!

ಏಕೆಂದರೆ; ಹಳೆಯ ಹಳಿಯ ಮೇಲೆ ಸವೆದು ಹೋದ ರೈಲು ನವೆಯುತ್ತಾ ಸಾಗಿ ಅದೇ ಹಳೆಯ ನಿಲ್ದಾಣಗಳೆಂಬ ಏಕತಾನತೆಯಲ್ಲಿ ಕಳೆದು ಹೋಗುತ್ತಿದ್ದ ನನ್ನ ಬದುಕಿನ ಹಳಿ, ರೈಲು, ನಿಲ್ದಾಣಗಳನ್ನು ಭಾವನೆಗಳೆಂಬ ಜೀವ ಕಟ್ಟಿ ಹೊಸದಾಗಿ ನಿರ್ಮಿಸಲು ಪ್ರೇರೇಪಿಸುವುದೇ ಆ ನಿನ್ನ ನೆನಪುಗಳು!! 🙂

“ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ

ಪ್ರೀತಿಯ ಸವಿಮಾತೇ ಉಪಾಸನೆ”.

ಹೌದು ಕಣೇ; ಬದುಕಿಗೆ ಸಾವಿರ ಸಾವಿರ ಕವಲುದಾರಿಗಳಿವೆ. ಆದರೂ ನಾನು ಪ್ರೀತಿಯ ಹಾದಿಯಲ್ಲಿ ನಿನ್ನ ಹುಡುಕುತ್ತ ಬಂದವನು! ಸಾವಿರ ಸಾವಿರ ದಿನಗಳು ಉರುಳಿದರೂ ನಿನ್ನ ಹೊರತು ಮತ್ತೊಬ್ಬರು ನನಗಿಲ್ಲವೆಂಬಂತೆ ನಿನ್ನೆಡೆಗೆ ನಡೆಯುತ್ತಿದ್ದೇನೆ.

ಪ್ರತಿಕ್ಷಣ ಇಂತ ನೂರಾರು ಭಾವನೆಗಳು ಕಾಡುತ್ತವೆ. ಅವಕ್ಕೆಲ್ಲ ಉತ್ತರ ನಿನ್ನ ಸಮ್ಮುಖದಲ್ಲಿ ಸಿಗುತ್ತೆ. ನಿನ್ನ ಚಿಗುರು ಬೆರಳ ತಣ್ಣನೆಯ ಸ್ಪರ್ಶದಲ್ಲಿ ಸಿಗುತ್ತದೆ. ಅದೇ ನನ್ನ ಆತ್ಮಬಲ, ಮತ್ತೆ ಜೀವಜಲ!! ನೀನು ನನ್ನ ಜೊತೆಯಾಗಿರುವಷ್ಟು ಕ್ಷಣ, ಜಗತ್ತನ್ನೇ ಅಂಗೈಯಲ್ಲಿ ಹಿಡಿದಷ್ಟು ಸಂತೋಷ ನನ್ನದಾಗಿರುತ್ತದೆ ಕಣೇ ನನ್ನ ಗೆಳತಿ:) ಯಾವಾಗಲೂ ನಿನಗೆ ಒಳ್ಳೆಯದನ್ನೇ ಬಯಸುವ ನಾನು, ನಿನ್ನ ಪ್ರೀತಿಸುವುದರಲ್ಲಿ ಥೇಟ್ ನಿನ್ನ ಅಮ್ಮನೇ ಕಣೇ 🙂 ಸಮುದ್ರವೇ ನಾಚಿಸುವಷ್ಟು ಇಷ್ಟಪಡುವ ನಾನು, ನೀನು ಇಲ್ಲದ ನನ್ನ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. 🙂

ನೀನಿಲ್ಲದ ಬದುಕು ಎಷ್ಟೊಂದು ಕೃತಕ ಗೆಳತಿ?? ನಿನ್ನನ್ನು ಮರೆಯುತ್ತೇನೆ ಅಂತ ಹೊರಡೋದೇ ಶುದ್ದ ಸುಳ್ಳು, ಅಪ್ಪಟ ಆತ್ಮವಂಚನೆ!! 😦

ಹ ಹಾ, ತಲೆಮೇಲೆ ಕೈ ಇಟ್ಟು ಕೂತಿದಿಯಾ ಅಂತ ನಂಗೊತ್ತು. ಹು ಹು ಅಂತದ್ದೆನಿಲ್ಲ ಕಣೇ, ಮುಗ್ಧವಾಗಿ ಹೇಳ್ಬೇಕು ಅಂದ್ರೆ ನಾ ನಿನ್ನ ಪ್ರೀತಿಸ್ತೀನಿ! 🙂

ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ ನಿನ್ನನು ಕಂಡ ದಿನವೇ ಹೊರಹೊಮ್ಮಿತು ನಿನ್ನ ಮೇಲಿನ ನನ್ನ ಪ್ರೀತಿ. ಹೌದು ಕಣೇ, ನೀನು ಜತೆಯಾದ ದಿನದಿಂದ ನನ್ನ ಪ್ರತಿನಿತ್ಯದ ಬೆಳಗುಗಳು ಇನ್ನಷ್ಟು ಸುಂದರವಾಗಿವೆ, ಮಧುರವಾಗಿವೆ, ಜೀವನ ಮುನ್ನಡೆಸ್ಸೋಕ್ಕೆ ಒಲವಿನ ದೋಣಿ ನನ್ನದಾಗಿದೆ ಎಂಬ ಹುರುಪಿದೆ. ನನ್ನೀ ಹಾಯ ದೋಣಿಯ ಪಯಣಿಗಳಾಗ್ತೀಯಾ ಅಲ್ವಾ?

ನಿನ್ನ ಪ್ರತ್ಯುತ್ತರಕ್ಕೆ ಸ್ಯಾಂಕಿ ಕೆರೆಯ ದಡದಲ್ಲಿ ಕಾಯುತ್ತಾ ಕುಳಿತಿರ್ತೀನಿ ಪ್ರತಿ ಸಂಜೆನೂ. ನಿನಗೆ ಬೇಕಾದಷ್ಟು ಸಮಯ ತೆಗೆದುಕೊಂಡು, ಸಮಾಲೋಚಸಿ ಬಂದು ಹೇಳು ನಿನ್ನ ಅಭಿಲಾಷೆಯನ್ನ. 🙂

ಹ ಹಾ ಏನ್ ಇಷ್ಟೊಂದು ವಿನಯವಾಗಿ ಕೇಳ್ತಾ ಇದಾನೆ ಅಂತ ಅಂದುಕೊಳ್ತಾ ಇದ್ದೀಯ ಅಲ್ವಾ? ಗೊತ್ತಲ್ಲಾ ನಾವ್ ಹೆಂಗೆ ಅಂದ್ರೆ, ಆಗಲ್ಲ ಅಂದ್ರೆ ಹೊತ್ತಾಕೊಂಡ್ ಬರ್ತಿವೀ ಅಂತಾ! 😉

ಸುಮ್ನೆ ತಮಾಷೆಗೆ ಹಾಗ್ ಹೇಳ್ದೆ ಮಹಾರಾಯಿತಿ! ಕಾಯುತ್ತ ಇರ್ತೀನಿ, ತಡ ಮಾಡಬೇಡ. 🙂

ಇಂತಿ ನಿನ್ನ ಪ್ರೀತಿಯ
ಹುಡುಗ. 🙂

ಸಂತೆಯಲ್ಲಿ ಕಳೆದು ಹೋದ ನನ್ನ ಹುಡುಕುತಾ!!

೨೦೧೩ರ ಚಿತ್ರ ಸಂತೆಯ ಕಣ್ಮನ ಸೆಳೆಯುವ ವೃತ್ತಿಪರತೆ ಇನ್ನು ನಯನ ಮಾಸಿ ಹೋಗಿದ್ದಿರ್ಲಿಲ್ಲ. ಅಷ್ಟ್ರಲ್ಲೆ ೨೦೧೪ರ ಚಿತ್ರ ಸಂತೆ ಹೇಗೋ ಆಮಂತ್ರಿಸಿತ್ತು. ಹಳೆಯ ವರ್ಷದ ನೆನಪಿನ ಬುತ್ತಿ ಕಟ್ಟಿಕೊಂಡ ಬಗೆ ಮನಸೋ ಇಚ್ಚೆ ಸಂಭ್ರಮಿಸಿದ ಹಾಗೇ 🙂

ಪ್ರೀತಿಯ ತನ್ಮಯತೆ
ಪ್ರೀತಿಯ ತನ್ಮಯತೆ

ಈ ಬಾರಿಯೂ ಅದೇ ನಿರೀಕ್ಷೆಯಲ್ಲಿ ಹೊರಡಲು ಅಣಿಯಾದೆ ಕುಮಾರಕೃಪಾ ರಸ್ತೆಯ ಹೆಜ್ಜೆ ಹಿಡಿದು. ಹಾಗಂತಲೇ ಕಳೆದ ಬಾರಿ ಈ ಸಂತೆಯಲ್ಲಿ ಜೊತೆಗೂಡಿದ್ದ ಸ್ನೇಹಿತನನ್ನ ಕರೆದೆ. ಅವ ಯಾವುದೋ ನೆಪ ಹೊಡ್ಡಿ ಬರುವುದಿಲ್ಲವೆಂದ. ನಾನು ಹೋಗುವುದೋ ಬೇಡವೋ ಎಂದು ತಲೆಯಲ್ಲಿ ಹುಳ ಬಿಟ್ಟುಕೊಂಡು ಕೂತಿರಬೇಕಾದ್ರೆ ಹಳೆಯ ಮಾಸದ ನೆನಪು ಕಣ್ಣ ಮುಂದೆ ಹಾದು ಹೋದವು!!

ಶಿಲ್ಪಕಲೆಯ ಚಿತ್ರಣ
ಶಿಲ್ಪಕಲೆಯ ಚಿತ್ರಣ

ಎಲ್ಲಿ ಆ ಸುಮಧುರ ಕ್ಷಣಗಳನ್ನ ಕಳೆದುಕೊಳ್ಳುವ ಗೋಜಿಗೆ ಸಿಲುಕುತ್ತಿನೋ ಎಂದುಕೊಂಡು, ಒಬ್ಬನೇ ಮನಸ್ಸು ಮಾಡಿದೆ ಹೋಗೇ ತೀರೋಣವೆಂದು 😉 ಹೊರಟೇಬಿಟ್ಟೆ ಒಬ್ಬನೇ ಅಪರಾಹ್ನ ಸುಮಾರು ಎರಡು ಮೂವತ್ತಕ್ಕೆ, ಅಂತು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಜಾಡು ಹಿಡಿದು 😛

ಅವಳ ಸಿಂಚನ
ಅವಳ ಸಿಂಚನ

ಇನ್ನು ಪರಿಷತ್ತು ೫೦೦ಕ್ಕೂ ಹೆಚ್ಹಿನ ಮೀಟರ್ ದೂರವಿದ್ದರೂ, ಅಲ್ಲಿ ಕುಮಾರಕೃಪಾ ರಸ್ತೆಯೇ ಕಲಾಶಾಲೆಯಾಗಿತ್ತು 🙂 ಬಣ್ಣ ಬಣ್ಣದ ಚಿತ್ರಪಟಗಳು ರಸ್ತೆಯ ಆಸುಪಾಸಿನಲ್ಲಿ ನೋಡುಗ­ರನ್ನು ಆಕರ್ಷಿಸಿದ್ದವು. ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸಿದ್ದ ೧೧ನೇ ಚಿತ್ರಸಂತೆಯಲ್ಲಿ ಜನಮನ  ಕಲಾ ಸಂಗಮವಾಗಿತ್ತು. ಕುಮಾರಕೃಪಾ ರಸ್ತೆ ಅಕ್ಷರಶಃ ಕಲಾಲೋಕವಾಗಿ ಬದಲಾಗಿತ್ತು. 🙂

ತನ್ನಿಮಿತ್ತ
ತನ್ನಿಮಿತ್ತ

ಸಾಂಪ್ರದಾಯಿಕ ಮೈಸೂರು, ತಂಜಾವೂರು, ರಾಜ­ಸ್ತಾನಿ, ಮಧುಬನಿ ಶೈಲಿಯ ಕಲಾಕೃತಿಗಳ ಜತೆಗೆ ಅಕ್ರಿಲಿಕ್‌, ಕೊಲಾಜ್‌, ಲಿಥೋಗ್ರಾಫ್‌, ಎಂಬೋ­ಸಿಂಗ್‌, ಗಾಜಿನ ಮೇಲೆ ರಚಿಸಿದ ಚಿತ್ರಗಳು ನೋಡುಗರ ಮನಸೂರೆಗೊಂಡವು. 🙂 ಸಂತೆಯಲ್ಲಿ ಕಲಾವಿದರು ತಮ್ಮ ಕಲಾಕೃತಿಗಳನ್ನು ಮಾರಲು ತಂದಿದ್ದರೆ, ಕಲಾಸಕ್ತರು ತಮಗೆ ಇಷ್ಟವಾಗುವ ಕಲಾಕೃತಿಗಳನ್ನು ಕೊಳ್ಳಲು ಸಂತೆಯಲ್ಲಿ ತಿರುಗಾಡುತ್ತಿದ್ದುದು ಸಾಮಾನ್ಯ­ವಾಗಿತ್ತು. 🙂

ಓಂ ನಮಃ ಶಿವಾಯ
ಓಂ ನಮಃ ಶಿವಾಯ

ರಾಜ್ಯದ ಎಲ್ಲ ಜಿಲ್ಲೆಗಳಿಂದ ಹಾಗೂ ತಮಿಳು­ನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯ­-ಗಳಿಂದ ಕಲಾವಿದರು ಸಂತೆಯಲ್ಲಿ ಪಾಲ್ಗೊಂಡಿ­ದ್ದರು. ಕಲಾವಿದ ಹಾಗೂ ಕಲಾಸಕ್ತರ ಮಧ್ಯೆ ಮಧ್ಯವರ್ತಿ ಇಲ್ಲದ ಕಲಾಮಿಲನಕ್ಕೆ ಸಾಕ್ಷಿಯಂತಿತ್ತು ನಮ್ಮ ೨೦೧೪ರ ಚಿತ್ರಸಂತೆ. 😉

ನನ್ನ ಕನಸಿನ ಮನೆ
ನನ್ನ ಕನಸಿನ ಮನೆ

ನಮ್ಮ ಸಂಸ್ಕೃತಿ, ಇತಿಹಾಸದ ಕುರುಹು, ಸಾಮಾಜಿಕ ನ್ಯಾಯದ ಧ್ವನಿ, ಪ್ರಕೃತಿಯ ತನ್ಮಯತೆ, ವನ್ಯ ಮೃಗಗಳ ಜೀವನ ಎಲ್ಲವನ್ನೂ ಸೊಗಸಾಗಿ ಒಂದೇ ಕಡೆ ಚಿತ್ರಿಸಿರುವುದನ್ನು ಕಾಣಬಹುದಾಗಿತ್ತು. ಅಕ್ಷರಶಃ ಕಲಾವಿದರು ತಮ್ಮ ಭಾವನೆಗಳನ್ನು ಬಣ್ಣಗಳಿಂದ ಹೊರತಂದಿದ್ದರು. 🙂

ಆ ಮುಗ್ಧತೆ
ಆ ಮುಗ್ಧತೆ

ಪ್ರತಿವರ್ಷ ಜನವರಿಯಲ್ಲಿ ಚಿತ್ರಕಲಾ ಪರಿಷತ್ ಏರ್ಪಡಿಸುವ ಈ ಸಂತೆ ಲಕ್ಷಾಂತರ ಮಂದಿಯನ್ನು ತನ್ನೆಡೆಗೆ ಸೆಳೆಯುತ್ತಲೇ ಇದೆ. ಹತ್ತಾರು ಸಾವಿರ ಕಲಾವಿದರಿಗೆ ತಮ್ಮ ಕಲೆಯ ಔತಣವನ್ನು ಜನ ಸಾಮಾನ್ಯರಿಗೆ ನೀಡುವ ಕೆಲಸ ಇದರಿಂದ ಸಾಧ್ಯವಾಗಿದೆ.

ಇತಿಹಾಸದ ಕುರುಹು
ಇತಿಹಾಸದ ಕುರುಹು

ಇಲ್ಲಿರುವ ಎಲ್ಲಾ ಚಿತ್ರಗಳ ಕೃತಿ ಸ್ವಾಮ್ಯ ಆಯಾ ಕಲಾವಿದರಿಗೆ ಸಲ್ಲಬೇಕು. ಇಲ್ಲಿರುವ ಚಿತ್ರಗಳು ಚಿತ್ರಸಂತೆಯನ್ನು ನೆನಪು ಮಾಡಿಕೊಳ್ಳಲು ಮಾತ್ರ. ಕಲೆಯನ್ನು ನೇರವಾಗಿಯೇ ನೋಡಿ ಆನಂದಿಸಬೇಕು. ಈ ಬಾರಿ ತಪ್ಪಿಸಿಕೊಂಡವರು ಮುಂದಿನ ಬಾರಿ ಹೋಗಲು ಮರೆಯಬೇಡಿ. ನಿಜವಾಗಿಯೂ ಕಲಾವಿದ, ಕಲೆ, ಕಲಾಸಕ್ತರ ಅಪೂರ್ವ ಸಂಗಮ. 🙂

ಗಜ ಗಾಂಭೀರ್ಯತೆ
ಗಜ ಗಾಂಭೀರ್ಯತೆ

ಕೊನೆಗೂ ನನ್ನೊಳಗಿನ ಕಲಾವಿದ ಸಂತೆಯಲ್ಲಿ ಕಳೆದುಹೋಗಿದ್ದ. ಅವನನ್ನ ಹುಡುಕಿ ಮನೆಗೆ ಕರೆದುಕೊಂಡು ಬರೋ ಹೊತ್ತಿಗೆ ನೇಸರ ತನ್ನ ಕೆಲಸ ಮುಗಿಸಿ ಚಂದ್ರನಿಗೆ ತನ್ನ ಪಾಳಿಯನ್ನ ಬಿಟ್ಟಿದ್ದ. ಮನಸ್ಸು ಖುಷಿಯಿಂದ ತೆಲಾಡುತ್ತಿತ್ತು. ಜೊತೆಗೆ ಬೇಸರಿಸಿಕೊಂಡಿತ್ತು; ಇನ್ನು ಬೇಗಾನೆ ಬಂದಿದ್ರೆ ಸಕತ್ತ್ ಇರ್ತಿತ್ತ್ ಅಲ್ವಾ ಅಂದುಕೊಂಡು, ತಡಮಾಡಿದ ಸ್ನೇಹಿತನನ್ನ ಶಪಿಸುತ್ತಾ. 😛

ಆ ವ್ಯಾಗ್ರತೆ
ಆ ವ್ಯಾಗ್ರತೆ

ಇಷ್ಟಕ್ಕೆಲ್ಲಾ ಸಾಕ್ಷಿಯಾಗಿದ್ದು ೦೫/೦೧/೨೦೧೪ ರಂದು ಜರುಗಿದ ೧೧ನೆಯ ಚಿತ್ರಸಂತೆ. 🙂

ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಂಗಳೂರು.

ಇಂತಿ ನಿಮ್ಮವ;
@ Triple K 🙂