ದೇಶಕ್ಕಾಗಿ ಮಡಿದವನನ್ನು ದೇಶವೇ ಮರೆಯಿತೆ?!

ಕೃಪೆ: ಕನ್ನಡಪ್ರಭ ಅಂಕಣ ದುರಂತ.., ಚಿರಂಜೀವಿ ಭಟ್ ರವರಿಂದ

ಅಂದು 1952 ಏಪ್ರಿಲ್ 11ರ ಸೂರ್ಯಾಸ್ತದ ಸಮಯ. ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ  ಮುಂದೆ ಭಾರತದ ‘ಬ್ಲ್ಯಾಕ್ ಟೈಗರ್‌’ ಎಂದೇ ಹೆಸರಾದ ಅಪ್ರತಿಮ ವೀರ ರವೀಂದ್ರ ಕೌಶಿಕ್‌ನ ಜನನವಾಯಿತು.

ರವಿಂದರ್  ಕೌಶಿಕ್
ರವಿಂದರ್ ಕೌಶಿಕ್

ಬಾಲಕ ರವಿಂದ್ರ ಕೌಶಿಕ್‌ಗೆ ಸಣ್ಣವನಿದ್ದಾಗಲೇ ದೇಶದ ಬಗ್ಗೆ ಅತ್ಯಂತ ಕಾಳಜಿ. ಮನೆಯಲ್ಲಿ ಹಿರಿಯರು ಹೇಳುತ್ತಿದ್ದ ಶಿವಾಜಿ, ಸುಭಾಷ್, ಆಜಾದ್‌ರ ಕಥೆ ಕೇಳುತ್ತಲೇ ಬೆಳೆದ. ಎಲ್ಲ ಮಕ್ಕಳಂತೆ ಕೇಳಿ ಸುಮ್ಮನಾಗುವ ಜಾಯಮಾನ ಆ ಹುಡುಗನದ್ದಾಗಿರಲಿಲ್ಲ. ಬದಲಿಗೆ ಅದನ್ನು ತನ್ನ ಸ್ನೇಹಿತರಿಗೆಲ್ಲಾ ಕಣ್ಣಿಗೆ ಕಟ್ಟಿದಂತೆ ವಿವರಿಸುತ್ತಿದ್ದ. ಮಕ್ಕಳ ಜೊತೆಗೂಡಿ ಶಾಲೆಗಳಲ್ಲಿ ಯಥಾವತ್ತಾಗಿ ಅಭಿನಯಿಸುತ್ತಿದ್ದ. ಕೌಶಿಕ್, ಪ್ರತೀ ಸಲವೂ ಸುಭಾಷ್ ಮತ್ತು ಆಜಾದ್‌ರ ಪಾತ್ರವನ್ನು ಹಠ ಮಾಡಿ ತನ್ನದಾಗಿಸಿಕೊಳ್ಳುತ್ತಿದ್ದ.

ರವೀಂದ್ರ ಕೌಶಿಕ್ ರಾಜಸ್ಥಾನದಲ್ಲೇ ಪ್ರಾಥಮಿಕ ಶಿಕ್ಷಣ ಪಡೆದ. ದಿನ ಕಳೆದಂತೆ ರಂಗಭೂಮಿಯೆಡೆಗೆ ಒಲವು ಹೆಚ್ಚಾಯಿತು. ಮತ್ತು ಅಷ್ಟೇ ಅಲ್ಪ ಅವಧಿಯಲ್ಲಿ ನಟನೆಯೂ ಮೈಗೂಡಿತು. ಯಾವ ಕೆಲಸ ಹಿಡಿದರೂ ಅದರಲ್ಲಿ ಯಶಸ್ವಿಯಾಗದೆ ಕೈಬಿಡುತ್ತಿರಲಿಲ್ಲ. ಅದಕ್ಕೆ ಸಾಕ್ಷಿಯಾಗಿ ಲಕ್ನೌನಲ್ಲಿ ನಡೆದ ರಾಷ್ಟ್ರ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಅಭಿನಯಿಸಿ, ಬಹುಮಾನವನ್ನೂ ಗಿಟ್ಟಿಸಿಕೊಂಡ.

ನಾವೊಂದು ಬಗೆದರೆ, ಆ ದೈವವೊಂದು ಬಗೆಯುತ್ತದೆ ಎನ್ನುವ ಮಾತಿನಂತೆ ಆ ಸ್ಪರ್ಧೆಯನ್ನು ನೋಡಲು ಬಂದಿದ್ದ ಭಾರತದ ಗುಪ್ತದಳ ‘ರಾ'(RAW) ಮುಖ್ಯಸ್ಥರು  ಕೌಶಿಕ್‌ನ ಕ್ಷಮತೆಯನ್ನು ಗುರುತಿಸಿ ಆತನನ್ನು RAWಗೆ ಸೇರುವಂತೆ ಪ್ರೇರೇಪಿಸಿದರು. ಮೊದಲೇ ದೇಶ ಪ್ರೇಮ ಉಳ್ಳವನಾಗಿದ್ದ ಯುವಕ ಕೌಶಿಕ್‌ಗೆ ಕಿವಿ ನೆಟ್ಟಗಾದಂತಾಯಿತು. ಡಿಗ್ರಿಯನ್ನು ನಾಮಕಾವಸ್ಥೆಗೆ ಮುಗಿಸಿದವನೇ ತನ್ನ 23ನೇ ವಯಸ್ಸಿನಲ್ಲಿ RAWಗೆ ವಿಶೇಷ ‘ಅಂಡರ್ ಕವರ್‌’ ಏಜೆಂಟ್ ಆಗಿ ಸೇರ್ಪಡೆಯಾದ. RAW ಕೂಡ ಅವನ ಆಗಮನಕ್ಕೆ ಕಾಯುತ್ತಿತ್ತು ಎಂಬಂತೆ ಕೌಶಿಕ್ ಡ್ಯುಟಿಗೆ ರಿಪೋರ್ಟ್ ಆಗುತ್ತಿದ್ದಂತೆಯೇ ಅವನನ್ನು ಪಾಕಿಸ್ತಾನಕ್ಕೆ ಒಂದು ಮಿಷನ್‌ನ ಮೇಲೆ ಕಳುಹಿಸಿತು. ಪಾಕಿಸ್ತಾನದಲ್ಲಿದ್ದ ದಿನಗಳು ರವೀಂದ್ರ ಕೌಶಿಕ್‌ನನ್ನು RAW, ಖಾಲಿ ಖಾಲಿಯಾಗಿ ಕಳುಹಿಸಲಿಲ್ಲ. ಬದಲಿಗೆ ದೆಹಲಿಯಲ್ಲಿ ಸತತ ಎರಡು ವರ್ಷಗಳ ತರಬೇತಿಯನ್ನೂ ನೀಡಿತು. ಅದರಲ್ಲಿ ಪಾಕಿಸ್ತಾನದ 100 ಪ್ರತಿಶತ ವಿವರಗಳನ್ನೂ ನೀಡಿ ಕೌಶಿಕ್‌ಗೆ ಮುಸಲ್ಮಾನ ಪದ್ಧತಿಯಂತೆ ಸುನ್ನತ್(Circumcision) ಅನ್ನೂ ಮಾಡಲಾಯಿತು.

ಅತ್ಯಂತ ಬುದ್ಧಿವಂತನಾಗಿದ್ದ ರವೀಂದ್ರ ಕೌಶಿಕ್ ಅಲ್ಪಾವಧಿಯಲ್ಲಿ ಉರ್ದು ಮಾತನಾಡುವುದನ್ನು ಮತ್ತು ಮುಸಲ್ಮಾನರ ಧಾರ್ಮಿಕಾಚರಣೆಯನ್ನೂ ಕಲಿತ. ಆ ಯುವಕನ ಕಲಿಕೆಯು ಎಷ್ಟರ ಮಟ್ಟಿಗೆ ಉತ್ತಮವಾಗಿತ್ತೆಂದರೆ ಪಾಕಿಸ್ತಾನದ ಇನ್ನಿತರ ಸಣ್ಣ ಪುಟ್ಟ ಪ್ರದೇಶಗಳಲ್ಲಿ ಆಡುವ ಭಾಷೆಯನ್ನೂ ತನ್ನ ಮಾತೃ ಭಾಷೆಯಷ್ಟೇ ಸರಾಗವಾಗಿ ಆಡುತ್ತಿದ್ದ. ಒಟ್ಟಾರೆಯಾಗಿ, ಪಾಕಿಸ್ತಾನಕ್ಕೆ ಹೊರಡುವ ವೇಳೆ ಆತ ಸಂಪೂರ್ಣ ಮುಸಲ್ಮಾನನಾಗಿದ್ದ. ತಂದೆ ತಾಯಿಯೂ ಸಹ ‘ಅವನು ಮುಸಲ್ಮಾನನಲ್ಲ’ ಎಂದರೆ ನಂಬಲಾರದಷ್ಟು ಮಟ್ಟಿಗೆ ಬದಲಾಗಿದ್ದ. 1975 ರಲ್ಲಿ ಕೌಶಿಕ್‌ನನ್ನು ‘ನಬೀ ಅಹಮ್ಮದ್ ಶಕೀರ್‌’ ಎಂದು ಮರುನಾಮಕರಣ ಮಾಡಿ ಭಾರತದ ಅಂಡರ್‌ಕವರ್ ಏಜೆಂಟ್ ಆಗಿ ಪಾಕಿಸ್ತಾನಕ್ಕೆ ಕಳುಹಿಸಲಾಯಿತು. ಪಾಕಿಸ್ತಾನಕ್ಕೆ ಹೋದವನೇ ಕರಾಚಿ ವಿಶ್ವವಿದ್ಯಾನಿಲಯದಲ್ಲಿ ಸೀಟು ಗಿಟ್ಟಿಸಿಕೊಂಡು ಕೆಲವೇ ವರ್ಷಗಳಲ್ಲಿ ಎಸ್‌ಎಲ್‌ಬಿಯನ್ನೂ ಮುಗಿಸಿದ. ಎಲ್‌ಎಲ್‌ಬಿ ಪದವಿ ಕೇವಲ ನಾಮಕಾವಸ್ಥೆಗಾಗಿತ್ತಷ್ಟೇ. ಪಾಕಿಸ್ತಾನಕ್ಕೆ ಬಂದ ಅಸಲೀ ಕೆಲಸ ಶುರು ಮಾಡುವ ಸಮಯ ಈಗ ಬಂದೊದಗಿತ್ತು. ಪಾಕಿಸ್ತಾನೀ ಸೈನ್ಯಕ್ಕೆ ಸಾಮಾನ್ಯ ಅಧಿಕಾರಿಯಾಗಿ ಸೇರಿ ಕೆಲವೇ ವರ್ಷಗಳಲ್ಲಿ ತನ್ನ ಚಾಕಚಕ್ಯತೆಯಿಂದ ಪ್ರತಿಷ್ಠಿತ ಮೇಜರ್ ಹುದ್ದೆಯನ್ನು ಅಲಂಕರಿಸಿದ.

ಎಲ್ಲರೂ ಹೇಳುವಂತೆ ಪ್ರೀತಿ ಕುರುಡು. ಅದು ಕೌಶಿಕ್‌ನ ಜೊತೆಗೂ ಆಯಿತು. ‘ಅಮಾನತ್‌’ ಎಂಬ ಪಾಕಿಸ್ತಾನೀ ಯುವತಿಯನ್ನು ಪ್ರೀತಿಸಿ ಮದುವೆಯಾಗಿ ವರ್ಷದಲ್ಲಿ ಹೆಣ್ಣು ಮಗುವಿನ ತಂದೆಯಾದ. ಆತ ಅಲ್ಲಿನ ಸೇನೆಯಲ್ಲಿ 1979ರಿಂದ 1983ರವರೆಗೆ ಇದ್ದು ಪಾಕಿಸ್ತಾನದ ಕುತಂತ್ರಗಳನ್ನೆಲ್ಲಾ ಅರಿಯುತ್ತಾ ಭಾರತದ ರಕ್ಷಣಾ ಇಲಾಖೆಗೆ ಅಮೃತವೆನಿಸುವ ಅತಿ ಮುಖ್ಯವಾದ ವಿಷಯಗಳನ್ನೆಲ್ಲಾ ರಹಸ್ಯವಾಗಿ ರವಾನಿಸುತ್ತಿದ್ದ. ಈ ಅತ್ಯುನ್ನತ ಸಾಧನೆಗಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಕೌಶಿಕ್‌ನ ಅನುಪಸ್ಥಿತಿಯಲ್ಲಿ ಆತನಿಗೆ BLACK TIGER ಎಂಬ ಬಿರುದನ್ನೂ ನೀಡಿದರು. ಕೌಶಿಕ್ ಭಾರತ ಮತ್ತು ತನ್ನ ಕುಟುಂಬವನ್ನು ಬಿಟ್ಟಿದ್ದದ್ದು ಬರೋಬ್ಬರಿ 26 ವರ್ಷಗಳು. ಯುದ್ಧದ ಸಮಯದಲ್ಲಿ ಕೌಶಿಕ್‌ನ ಸೇವೆ ನಿಜಕ್ಕೂ ಅತ್ಯಮೋಘವಾದದ್ದು. ಯುದ್ಧದ ಸಮಯದಲ್ಲಿ ಕೌಶಿಕ್ ಮಾಡಿದಂತಹ ಕೆಲಸವನ್ನು ಇಂದಿಗೂ ಎಷ್ಟೋ RAW ಏಜೆಂಟ್‌ಗಳು ಮಾಡಲು ಹಿಂಜರಿಯುತ್ತಾರೆ. ಕೌಶಿಕ್ ಕೊಟ್ಟ ಅತ್ಯುಪಯುಕ್ತ ಮಾಹಿತಿಯಿಂದ ಭಾರತದ ನಡಿಗೆ ಪಾಕಿಸ್ತಾನಕ್ಕಿಂತ ಒಂದು ಹೆಜ್ಜೆ ಮೇಲಕ್ಕೇರಿತು. ಪಾಕಿಸ್ತಾನ ಯುದ್ಧದಲ್ಲಿ ಮಾಡುವ ಕುತಂತ್ರಗಳಿಗೆಲ್ಲಾ ಭಾರತ ‘ಚೆಕ್‌ಮೇಟ್‌’ ಎನ್ನುತ್ತಿತ್ತು. ಇನ್ನು ಕೆಲ ಸಂದರ್ಭಗಳಲ್ಲಿ ಪಾಕಿಸ್ತಾನ ರಾಜಸ್ಥಾನದ ಗಡಿ ಭಾಗಗಳಿಂದಲೂ ಯುದ್ಧ ಮಾಡಲು ಬರುವ ತಯಾರಿಯಲ್ಲಿದ್ದಾಗ, ಭಾರತಕ್ಕೆ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಿ ಪಾಕಿಸ್ತಾನದ ಕುತಂತ್ರಗಳನ್ನೆಲ್ಲ ಅಕ್ಷರಶಃ ಉಲ್ಟಾ ಮಾಡುತ್ತಿದ್ದ ರವೀಂದ್ರ ಕೌಶಿಕ್.

ಪ್ರತೀ ಆರಂಭಕ್ಕೊಂದು ಅಂತ್ಯವಿರಬೇಕು ನಿಜ. ಅದು ಪ್ರಕೃತಿ ನಿಯಮವೂ ಹೌದು. 1983 ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದ ಗುಪ್ತಚರ ದಳ, ಇನ್ಯತ್ ಮಸಿಹಾ ಎಂಬ ಏಜೆಂಟ್‌ನನ್ನು ಬ್ಲ್ಯಾಕ್ ಟೈಗರ್‌ನ ಸಹಾಯಕ್ಕಾಗಿ ಕಳುಹಿಸಿತು. ‘ರಾ’ದ ಈ ಕೆಲಸ ಕೌಶಿಕ್‌ನ ಪ್ರಾಣವನ್ನು ತೆಗೆಯಲು ಜವರಾಯನನ್ನು ಕಳುಹಿಸಿದಂತಾಯಿತು. ಇನ್ಯತ್ ಕೆಲವೇ ದಿನಗಳಲ್ಲಿ ಪಾಕಿಸ್ತಾನದ ಇಂಟಲಿಜೆನ್ಸ್ ಐಖಐ ಏಜೆಂಟ್‌ಗಳಿಗೆ ಸಿಕ್ಕಿಬಿದ್ದ. ಅದಾದ ಕೆಲವೇ ದಿನಗಳಲ್ಲಿ ‘ನಬೀ ಅಹಮ್ಮದ್‌’ ಅಲಿಯಾಸ್ ‘ರವೀಂದ್ರ ಕೈಶಿಕ್‌ನ’ ಅಸಲೀ ಕಥೆಯನ್ನು ಬಾಯಿ ಬಿಟ್ಟಿದ್ದ. ಅಷ್ಟೇ ಸಾಕಿತ್ತು ಪಾಕಿಸ್ತಾನಕ್ಕೆ.

ಕೌಶಿಕ್‌ನನ್ನು ಹಿಡಿದು ಸತತ ಎರಡು ವರ್ಷಗಳ ಕಾಲ ವಿಚಾರಣೆ ಹೆಸರಿನಲ್ಲಿ ನರಕ ತೋರಿಸಿತು. ಕೊನೆಗೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ 1985 ರಲ್ಲಿ ಆತನಿಗೆ ಮರಣ ದಂಡನೆ ವಿಧಿಸಿತು. ಆದರೆ ಅದನ್ನು ಕಾರಣಾಂತರಗಳಿಂದ ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಲಾಯಿತು. ಕೌಶಿಕ್‌ನನ್ನು ಪ್ರತೀ ಸಲವೂ ಬೇರೆ ಬೇರೆ ಜೈಲುಗಳಿಗೆ ವರ್ಗಾಯಿಸಲಾಗುತ್ತಿತ್ತು. ಸತತ 16 ವರ್ಷಗಳ ಕಾಲ ಆರೋಗ್ಯಕ್ಕೆ ಕುಂದುತರುವಂತಹ ವಾತಾವರಣವಿರುವ ಜೈಲಿನಲ್ಲಿ ತಳ್ಳಿದರು. ಇದರಿಂದ ಕೌಶಿಕ್‌ಗೆ ಟಿ.ಬಿ., ಅಸ್ತಮಾ ಮತ್ತಿನ್ನಿತರ ಹೃದಯ ಸಂಬಂಧಿ ಕಾಯಿಲೆಗಳು ಶುರುವಾದವು. ಆತ ಪಾಕಿಸ್ತಾನಿಗಳು ತನಗೆ ಕೊಡುತ್ತಿರುವ ಹಿಂಸೆಯ ಬಗ್ಗೆ ರಹಸ್ಯವಾಗಿ ಭಾರತಕ್ಕೆ ಪತ್ರಗಳನ್ನು ರವಾನಿಸುತ್ತಿದ್ದ. ಒಂದು ಪತ್ರದಲ್ಲಂತೂ ತನ್ನ ನೋವನ್ನು ಹೇಳುತ್ತಾ ಹೀಗೆಂದಿದ್ದ- ‘ಕ್ಯಾ ಭಾರತ್ ಜೈಸೇ ಬಡೇ ದೇಶ್ ಕೆ ಲಿಯೇ ಕುರ್ಬಾನಿ ದೇನೆ ವಾಲೋಂಕೊ ಯಹೀ ಮಿಲ್ತಾ ಹೈ?’ (ಭಾರತಕ್ಕಾಗಿ ತಮ್ಮ ಜೀವನವನ್ನೇ ತ್ಯಾಗಮಾಡುವವರಿಗೆ ಸಿಗುವ ಬಹುಮಾನ ಇದೇನಾ?)!

ನವೆಂಬರ್ 21, 2001ರಂದು ಶ್ವಾಸಕೋಶ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಕೊನೆಯುಸಿರೆಳೆದ. ಕೌಶಿಕ್‌ನನ್ನು ಜೈಲಿನ ಹಿಂಭಾಗದಲ್ಲಿ ಹೂಳಲಾಯಿತು. ಆತನ ತಾಯಿ ಸರ್ಕಾರಕ್ಕೆ ಎಷ್ಟೇ ಪತ್ರಗಳನ್ನು ಬರೆದರೂ ಮಾನಿವೀಯತೆಯ ದೃಷ್ಟಿಯಿಂದಲಾದರೂ ಒಂದಕ್ಕೂ ಸರ್ಕಾರ ಉತ್ತರ ಬರೆಯಲಿಲ್ಲ. ಭಾರತಕ್ಕಾಗಿ ತನ್ನ ಜೀವನವನ್ನೇ ಪಾಕಿಸ್ತಾನದಲ್ಲಿ ಕಳೆದು ಪರದೇಶಿ ನೆಲದಲ್ಲಿ ಅಸುನೀಗಿದವನ ಕುಟುಂಬಕ್ಕೆ ನಮ್ಮ ಘನ ಸರ್ಕಾರ ಕೇವಲ 500 ರುಪಾಯಿಗಳ ಮಾಶಾಸನ ನಿಗದಿ ಮಾಡಿ ಕೈ ತೊಳೆದುಕೊಳ್ಳಲು ಮುಂದಾಯಿತು. ಆದರೆ ಕೌಶಿಕ್‌ನ ಮನೆಯವರು ಸರ್ಕಾರ ಕೊಡುವ ಭಿಕ್ಷೆಗೆ ಕೈಯೊಡ್ಡುತ್ತಿಲ್ಲ. ಅನ್ಯ ದೇಶಗಳಿಂದ ಎರವಲು ಪಡೆದ ಏಪ್ರಿಲ್ ಫೂಲ್‌ನಂತಹ ದಿನಗಳನ್ನು ನಾವು ಆಚರಿಸುತ್ತಾ ಬಂದಿದ್ದೇವೆ. ಆದರೆ ಜನ್ಮದಿನವಿರಲಿ, ಕೌಶಿಕ್‌ನ ಹೆಸರನ್ನೂ ಎಷ್ಟೋ ಮಂದಿ ಕೇಳಿಯೇ ಇಲ್ಲವೆಂಬುದು ನಿಜಕ್ಕೂ ದುರಂತ. ಇಂದು ಭಾರತದ ಆ ವೀರಪುತ್ರನ ಜನ್ಮದಿನ, ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಎಲ್ಲರೂ ಪ್ರಾರ್ಥಿಸೋಣ!!

Advertisements

Published by

Triple K

ಹಾಗೇ ಸುಮ್ಮನೇ; ಚೂರು ಮಾತು, ಜಾಸ್ತಿ ಹುಡುಗಾಟ, ಚೂರು ಕೋಪ, ಜಾಸ್ತಿ ಪ್ರೀತಿ, ಸಂದರ್ಭಕ್ಕೆ ಸರಿಯಾಗೋ ಅಷ್ಟು ಗಾಂಭೀರ್ಯ !! ಇದೆಲ್ಲದರ ಜೊತೆಗೆ ದೊಡ್ಡ ಕನಸು. ಅದರ ಮಧ್ಯೆನೇ ಜೀವನದ ಸಣ್ಣ - ಪುಟ್ಟ ಅನುಭವಗಳನ್ನು ದೊಡ್ಡ ಖುಷಿಯಿಂದ ಆಚರಿಸೋ ಸ್ನೇಹಜೀವಿ ♥ ಒಟ್ಟಿನಲ್ಲಿ ಬದುಕಿನ ಬಯಲು ದಾರಿಯ ಅಲೆಮಾರಿ, ಮತ್ತೆ ಪ್ರತಿಕ್ಷಣವೂ ಅದರ ಗುರುವಿನ ವಿಧ್ಯಾರ್ಥಿ! ಹೀಗೆ ಅನ್ನಿಸಿದ್ದು, ಕಂಡಿದ್ದನ್ನ ಗೀಚೋ ಅಭ್ಯಾಸ ♥ ಸಂಭ್ರಮಿಸುವ ರೀತಿ, ಅನಿಸಿದ ಅನಿಸಿಕೆ, ಮನಕಳುಕುವ ತಳಮಳಗಳ ಹೆಸರು, ಅವುಗಳ ಉಸಿರು ಮೂಲೆ ಸೇರಬಾರದ್ದು ಅಂತ ಅದಕ್ಕೊಂದು ಪುಟ್ಟ ವೇದಿಕೆ ಕಲ್ಪಿಸ್ತಾ ಇದೀನಿ. :) ಅದುವೇ “ಅಪಧಮನಿ”, ಭಾವದ ಬದುಕಿನ ಬಯಲು ದಾರಿ ಅಲೆಮಾರಿಯ ಪ್ರಯಾಣದ ಹಾದಿ!!

ನಿಮ್ಮ ಅನಿಸಿಕೆ ತಿಳಿಸಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s