ವಿಜಯನಗರ ಸಾಮ್ರಾಜ್ಯದ ಹಂಪೆಯ ಒಂದು ನೋಟ !!

ಒಂದು ತಟದಲ್ಲಿ ಹರ್ಷದಿ ನಲಿನಲಿಯುತ್ತ ಹರಿದು, ಹರಿಹರರಿಗೆ ನಮಿಸುತ್ತಾ, ವಿರುಪಾಕ್ಷನಿಗೆ ಅಭಿಷೇಕ ಮಾಡಿ, ಕಷ್ಟದ ಮನದಲ್ಲೇ ತವರ ತೊರೆದು, ಕೃಷ್ಣನ ಸೇರ ಹೊರಟಿರುವ ತುಂಗಭದ್ರೆ, ಅದರ ಸುತ್ತ ಸಾವಿರಾರು ವರ್ಷಗಳ ಕಥೆ ಹೇಳುವ ಕಿಷ್ಕಿಂದೆಯ ಬೆಟ್ಟದ ತಪ್ಪಲು. ಹೀಗೆ ಶತ್ರುಗಳ ಆಕ್ರಮಣಕ್ಕೆ ಕಷ್ಟವೆನಿಸುವ ಸ್ಥಳ. ಇವೆಲ್ಲದರ ನಡುವೆ ಅದಕ್ಕೆ ವೈಭವದ ಹಿಂದೂ ಸಾಮ್ರಾಜ್ಯದ ರಾಜಧಾನಿಯ ಪಟ್ಟಕ್ಕೇರುವ ಅವಕಾಶ. ಯಾರಿಗುಂಟೂ ಯಾರಿಗೆ ಬೇಡ ಆ ಸೌಭಾಗ್ಯ?!! 🙂

ಮೇಲಿನ ನಾಲಕ್ಕು ಸಾಲು ಓದಿದ ಮೇಲೆ ಯಾರಿಗಾದರೂ ತಟ್ಟನೆ ಹೊಳೆಯುತ್ತೆ, ಹಿಂದೂ ಸಂಸ್ಕೃತಿಯ ದ್ಯೋತಕದಂತಿರುವ ಹಂಪೆಯ ಬಗ್ಗೆ ಹೇಳ ಹೊರಟ್ಟಿದ್ದೇನೆ ಎಂದು. ಮೂರು ದಿನ ನನ್ನ ಕಾಲಿಗೆ ಚಕ್ರ ಕಟ್ಟಿರೋ ತರ ಹಂಪೆಯ ಉದ್ದಗಲಕ್ಕೂ ತಿರುಗಿದ ಪರಿಣಾಮ ಈ ಲೇಖನ. ಇಲ್ಲ ಅಂದ್ರೆ ಸಂಭ್ರಮಿಸಿದ ರೀತಿ, ಅನಿಸಿದ ಅನಿಸಿಕೆ, ಮನಕಳುಕಿದ ತಳಮಳ ಮೂಲೆ ಸೇರುತ್ತೆ; ಅದಕ್ಕೆ ದಾಖಲಿಸುತ್ತಿದ್ದೇನೆ. 🙂

ವಿಶ್ವ ಪರಂಪರೆಯ ತಾಣ, ಹಂಪೆ

ಹೌದು ಕಣ್ರೀ, ಮಧ್ಯಯುಗದ ದಕ್ಷಿಣಭಾರತದ ವಿಜಯನಗರ ಸಾಮ್ರಾಜ್ಯದ ವೈಭವದ ರಾಜಧಾನಿ ಈಗಿನ ಆಗಿನ ಹಂಪೆ. ಪ್ರತಿಯೊಂದು ಕಲ್ಲು ಒಂದೊಂದು ಕತೆ ಹೇಳುವ ಶಿಲ್ಪಕಲೆಯ ಲೋಕ. ಹೊಯ್ಸಳ ಮತ್ತು ಚೋಳರ ಮನಮೋಹಕ ಸಾಂಪ್ರದಾಯಿಕ ವಾಸ್ತುಶಿಲ್ಪದ ಮುಂದುವರೆದ ಅವತರಣಿಕೆ. ಒಂದು ಕಾಲದಲ್ಲಿ ವೈಭವದಿಂದ ಮೆರೆದ ಹಂಪೆ ಈಗ ಗತವೈಭವವನ್ನು ಸಾರಲು ತುಂಗಭದ್ರೆಯ ಮಡಿಲಲ್ಲಿ ನೆನಪುಗಳನ್ನೇ ಹೊದ್ದು ನೆನಪುಗಳನ್ನೇ ಹಾಸಿ ಮಲಗಿದೆ, ಸುಮಾರು ೨೬ ಚದರ ಕಿ.ಮೀ. ವಿಸ್ತಾರದಲ್ಲಿ, “ವಿಶ್ವ ಪರಂಪರೆಯ ತಾಣ” ಎಂಬ ಹೆಸರಿನೊಂದಿಗೆ. ಆರಾಧ್ಯದೈವ ವಿರೂಪಾಕ್ಷಪ್ಪ ಅಲ್ಲಿಯೇ ನೆಲೆನಿಂತ್ತಿದ್ದಾನೆ, ಹಂಪೆಯ ಹಾಗುಹೋಗೂಗಳ್ಳನ್ನ ತನ್ನ ಕಣ್ಣಿನಿಂದ ನೋಡುತ್ತಾ, ಕಾಯುತ್ತಾ, ವಿರಮಿಸುತ್ತಾ !!??. 😉

ಜಗತ್ತಿನ ಅತಿದೊಡ್ಡ ಬಯಲಿನ ವಸ್ತುಸಂಗ್ರಹಾಲಯ ನಮ್ಮ ಹಂಪೆ. ಕೇಂದ್ರೀಕೃತವಾದ ಶ್ರೀ ವಿರುಪಾಕ್ಷಾ ದೇವಾಲಯ, ಅಚ್ಯುತರಾಯ ದೇವಾಲಯ, ವಿಜಯವಿಠ್ಠಲ ದೇವಾಲಯ, ಹೇಮಕೂಟ, ಪುರಂದರ ಮಂಟಪ, ವಜ್ರ ವೈಢೂರ್ಯವನ್ನ ಮಾರುತ್ತಿದ್ದರೆನ್ನಲಾದ ಬೀದಿ, ವಿಶ್ವವಿಖ್ಯಾತ ಕಲ್ಲಿನ ರಥ, ಅನೆ ಲಾಯ, ಒಂಟೆ ಸಾಲು, ಕಪ್ಪು ಶಿಲೆಯ ಪುಷ್ಕರಣಿ, ಉಗ್ರನರಸಿಂಹ, ಸಾಸಿವೆಕಾಳು ಗಣಪ, ಕಡಲೆಕಾಳು ಗಣಪ, ಅಂಜನಾದ್ರಿ ಪರ್ವತ, ಅರಮನೆಯ ಅವಶೇಷ, ರಾಣಿಯರ ಸ್ನಾನಗೃಹ, ಹಜಾರರಾಮ ದೇವಾಲಯ, ಬಡವಿಲಿಂಗ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಬಗಳು, ಮಹಾನವಮಿ ದಿಬ್ಬ, ಅನೇಕ ನೀರು ಸಂಗ್ರಹಿಸುವ ತೊಟ್ಟಿಗಳು, ಕಮಲ ಮಹಲು, ಚಂದ್ರಮೌಳೇಶ್ವರ ದೇವಾಲಯ, ನೆಲಮಾಳಿಗೆ ದೇವಾಲಯ, ಬಾಲಕೃಷ್ಣ ದೇವಾಲಯ, ಜೊತೆಗೆ ಸಾಮ್ರಾಜ್ಯ ಪತನಗೊಂಡಿದ್ದರಿಂದ ಕಾಮಗಾರಿ ಸ್ಥಗಿತಗೊಂಡು ಕೆಲವು ಭಾಗಗಳು ಅಪೂರ್ಣವಾಗಿ ಉಳಿದಿರುವ ಕಟ್ಟಡಗಳು, ಹೀಗೆ ಹತ್ತು ಹಲವು ವಿಜಯನಗರ ಸಾಮ್ರಾಜ್ಯದ ಅವಶೇಷಗಳನ್ನು ತನ್ನ ಒಡಲಲ್ಲಿಟ್ಟುಕೊಂಡು ಸಂಭ್ರಮಿಸುತ್ತಿದೆ ಹಾಳು ಹಂಪೆ. 🙂

ವಿಜಯನಗರ ಸಾಮ್ರಾಜ್ಯ
ವಿಜಯನಗರ ಸಾಮ್ರಾಜ್ಯ. ಚಿತ್ರ ಕೃಪೆ: ಅಂತರ್ಜಾಲ

ಈ ರೀತಿ ಸಂಭ್ರಮಿಸಲು ಕಾರಣ, ವೈಭವದ ವಿಜಯನಗರ ಸಾಮ್ರಾಜ್ಯದ ಪತನ. 😦

ಹೀಗೆ ಕಾಲನ ಕಾಲ ಬುಡದಲ್ಲಿ ಮಂಡಿಯೂರಿಕೊಂಡು ಬಿದ್ದು ಹೋಗಿರುವ ಸಾಮ್ರಾಜ್ಯ ವೈಭವದಿಂದ ಮೆರೆಯಲು, ಸಂಪೂರ್ಣ ಡೆಕ್ಕನ್ ಪ್ರಸ್ತ ಭೂಮಿಯನ್ನು ವಿಸ್ತರಿಸಲು ತೆಗೆದುಕೊಂಡ ಸಮಯ ಸರಿಸುಮಾರು ೨೦೦ ವರ್ಷಗಳು, ಅಂದರೆ ಸ್ತಾಪನೆಗೊಂಡು ೨೦೦ ವರ್ಷಗಳ ನಂತರ, ಅದು ಶ್ರೀ ಕೃಷ್ಣದೇವರಾಯನ ಅವಧಿಯಲ್ಲಿ.  ಕಾರಣ?? ಅಗತ್ಯಕ್ಕಿಂತ ಹೆಚ್ಚಿನದಾಗಿ ಸಿಕ್ಕ ಸಂಪನ್ಮೂಲಗಳು!! ವ್ಯವಸ್ತಿತ ತುಂಗಭದ್ರೆಯ ಸುತ್ತಲಿನ ಕೃಷಿಯ ಹಸಿರುಕ್ರಾಂತಿ, ಶ್ರೀಗಂಧ, ಚಿನ್ನ-ವಜ್ರದ ನಿಕ್ಷೇಪ, ಮಸಾಲೆ ಪದಾರ್ಥ, ಯುರೋಪಿನಿಂದ ಬಂದಂತಹ ಸವಲತ್ತು, ಅವರೊಂದಿಗಿನ ವ್ಯವಹಾರ, ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಬಲಗೊಂಡ ಸೈನಿಕಸೇನೆ, ಅಭ್ಯುದಯಕ್ಕೆ ಕಾರಣ. ಇವೆಲ್ಲವುದರ ಜೊತೆಗೆಯೇ ಮಾಲಿಕ್ ಕಫೂರನ ದಕ್ಷಿಣದ ಕಡೆಗಿನ ಅರ್ಭಟವೂ ಭೌಗೋಳಿಕವಾಗಿ ವಿಜಯನಗರ ವಿಸ್ತಾರವಾದುದರ ಮತ್ತೊಂದು ಮಜಲು. 🙂

ಈ ರೀತಿಯಲ್ಲಿ ವಿಸ್ತಾರವಾದ ಸಾಮ್ರಾಜ್ಯ ಕೇವಲ ೪೦ ವರ್ಷಗಳ ಅಲ್ಪಾವಧಿಯಲ್ಲಿಯೇ ನೆಲಕಚ್ಚಲು ಕಾರಣವಾದರೂ ಏನು?? ವೈಭವದ ಕುರುಹು ಎಷ್ಟೇ ಸತ್ಯಾಸತ್ಯತೆಯಿಂದ ಕೂಡಿದ್ದರೂ, ಸಾಮ್ರಾಜ್ಯವೆಂದ ಮೇಲೆ ಅದರ ಜೊತೆಜೊತೆಗೆ ಇದ್ದಂತಹ ದೇವದಾಸಿ ಪದ್ಧತಿ, ಬಾಲ್ಯವಿವಾಹ, ನವರಾತ್ರಿ ಉತ್ಸವದಲ್ಲಿ ಕುರಿ-ಕೋಣಗಳ ಬಲಿ, ಅಧಿಕಾರ ದಾಹ, ಹಣಕ್ಕಾಗಿ ಕ್ರೌರ್ಯ, ಕೃತಿಮತೆ, ಬಂಧುಗಳಿಗೆ ವಿಷ ಉಣಿಸುವ ಕೃತ್ಯ, ಶತ್ರುಗಳ ಜೊತೆ ಒಳ ಒಪ್ಪಂದ, ಅರಮನೆಯ ಪಿತೂರಿ, ಆಹಂ, ಕಾಮವಾಂಛೆ, ಸಾಮ್ರಾಜ್ಯಶಾಹಿ ಪ್ರಭುತ್ವದ ಕೊಳ್ಳೆ, ಆಕ್ರಮಣ, ತೆರಿಗೆ ಸುಲಿಗೆ, ಅಂತರಿಕ ಮೌಡ್ಯಗಳು ಕೂಡ ವಿಜಯನಗರದ ವಿಮರ್ಶೆಗೆ ಅರ್ಹವಾದುವು. ಒಂದುಗೂಡಿದ ಸುಲ್ತಾನರೊಂದಿಗಿನ ರಕ್ಕಸತಂಗಡಿಯ ಯುದ್ಧದ ಜೊತೆ ಇಂತಹ ನೈತಿಕ ಅದಃಪತನ ಕೂಡ ಸಾಮ್ರಾಜ್ಯದ ಪತನಕ್ಕೆ ಕಾರಣವಾಯಿತೇನೋ?! 😦

ಇಂತಹ ಸಂದರ್ಭ ಕಲಿಸುವುದಾದರೂ ಏನು?? ನಮ್ಮ ಸೋಲಿಗೆ ಶತ್ರುಗಳ ಪರಾಕ್ರಮ ಮುಖ್ಯವಾದುದಲ್ಲ, ನಮ್ಮೊಳಗಿನದೇ ಆದಂತಹ ಆಂತರಿಕ ದೌರ್ಬಲ್ಯ ಮುಖ್ಯಭೂಮಿಕೆಯಾಗಿ ಉಳಿದುಬಿಡುತ್ತದೆ. ಹೌದೂ ಕೂಡ!! ಇದೇನು ಭಾರತದ ಇತಿಹಾಸದಲ್ಲಿ ಹೊಸದಲ್ಲ. ಇತಿಹಾಸದುದ್ದಕ್ಕೂ ಪುನಃ ಪುನಃ ನಡೆಯುತ್ತಲೆ ಬಂದಿದೆ. ಭಾರತದ ಇತಿಹಾಸ ಭಾರತಕ್ಕೆ ಏನನ್ನು ಕಲಿಸಿಲ್ಲದಿರುವುದು ಸೋಜಿಗದ ವಿಷಯವೆ ಸರಿ 😦

ಹಂಪೆಯ ಇತಿಹಾಸ ಅದೇನೇ ಇರಲಿ. ಅದು ಕರ್ನಾಟಕದ ಭಾಗವಾಗಿರುವುದು ನಮ್ಮೆಲ್ಲರ ಪುಣ್ಯವೇ ಸರಿ 🙂 ಅದರ ವ್ಯವಸ್ತಿತ ನಿರ್ವಹಣೆ, ಸಂಸ್ಕೃತಿಯ ಪೋಷಣೆ ನಮ್ಮೆಲ್ಲರ ಹೊಣೆ. ಸಾಂಸ್ಕೃತಿಕ ಹಂಪೆಯ ನಾಶಕ್ಕೆ ಸುಲ್ತಾನರು ಹೇಗೆ ಹೊಣೆಗಾರರೋ, ಹಾಗೆಯೇ ನಮ್ಮ ಜನರ ಪಾಲುಗಾರಿಕೆ ಕೂಡ ಇದೆ. ಯುದ್ದದಲ್ಲಿ ಆದ ನಾಶಕ್ಕಿಂತ ಆನಂತರದಲ್ಲಿ ಹೆಚ್ಚು ನಾಶ ಆಗಿದೆ. ನಿಧಿಯ ಆಸೆ, ಪ್ರಾಚೀನವಸ್ತುಗಳ ವ್ಯವಹಾರ ಅಲ್ಲಿಯವರನ್ನ ನಾಶ ಕಾರ್ಯಕ್ಕೆ ಪ್ರಚೋದಿಸುತ್ತಿದೆ. ಅವರಿಗೆ ಹಂಪೆಯ ಮಹತ್ವದ ಪರಿಚಯ ಮಾಡಿಸಿ ಪ್ರಾಚೀನ ಅವಶೇಷಗಳ ಸಂರಕ್ಷಣೆ ಮುಖ್ಯವಾಗಿದೆ. ಪುರಾತತ್ವ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಕಾರ್ಯ ವೈಖರಿ ಮೆಚ್ಚಬೇಕ್ಕಾದ್ದೆ. ಉತ್ತಮವಾದ ರೀತಿಯಲ್ಲಿಯೇ ಕಾರ್ಯಾ ನಿರ್ವಹಿಸುತ್ತಿದ್ದಾರೆ. ಆದರೆ ಅದು ಶೀಘ್ರಗತಿಯಲ್ಲಿ ಸಾಗಿದರೆ ಇನ್ನು ಉತ್ತಮ. ಎಲ್ಲ ಅವಶೇಷಗಳನ್ನು ಸಂರಕ್ಷಿಸಬಹುದು ಎನ್ನುವ ಮಹದಾಸೆಯೊಂದಿಗೆ!! 🙂

ಇಂದು ನಮ್ಮ ಹಂಪೆ ಪ್ರತಿನಿತ್ಯ ಸಾವಿರಾರು ಭಾರತೀಯರು ಸೇರಿದಂತೆ ವಿದೇಶೀಯರು ಬಂದುಹೋಗುವ ಪುಣ್ಯಕ್ಷೇತ್ರ. ಅದಕ್ಕೋಸ್ಕರ ಉತ್ತಮ ರಸ್ತೆ, ಸಮಯಪಾಲಿತ ಸಾರಿಗೆ ವ್ಯವಸ್ಥೆ, ಸೂಚನಾ ಫಲಕ, ದೇವಾಲಯಗಳ ನಿರ್ವಹಣೆ, ರಾತ್ರಿಯಲ್ಲಿ ಬೆಳಕಿನ ವ್ಯವಸ್ಥೆ, ಅನೈತಿಕ ಚಟುವಟಿಕೆಗಳಿಗೆ ಕಡಿವಾಣ, ಜೊತೆಗೆ ತುಂಗಭದ್ರೆಯ ನೆರೆಹಾವಳಿಯ ನಿರ್ವಹಣೆ ಹಂಪೆಯ ವ್ಯವಸ್ಥಾಪನೆಯ ಮೂಲಮಂತ್ರವಾಗಲಿ. 🙂

ಕಲ್ಲಿನ ರಥ, ಹಂಪೆ

ನನ್ನ ಪ್ರಯಾಣ, ಅನುಭವ, ಅನಿಸಿಕೆ ಹೀಗೆ ಸಾಗುತ್ತೆ!! ನಾನ್ನಂತು ಹಂಪೆಯ ಉದ್ದಗಲಕ್ಕೂ ಹೆಜ್ಜೆ ಹಾಕಿದೆ, ನಾನೇ ಹಂಪೆಯ ರಾಜ ಅನ್ನೋ ತರಹ 😛 ಹೀಗೆ ರಾಜಗಾಂಭೀರ್ಯದಿಂದ ಸಾಗುವಾಗ; ಹಂಪೆಯ ಪ್ರತಿ ಕಲ್ಲು, ಬಂಡೆಗಳು, ಭಗ್ನಗೊಂಡು ಇತಿಹಾಸಕ್ಕೆ ಸಾಕ್ಷಿಯಾದ ಸ್ಮಾರಕಗಳು ತಮ್ಮ ತಮ್ಮಲ್ಲಿ ಪಿಸುಗುಡುತ್ತಾ ಇಂತಹ ಎಷ್ಟೋ ರಾಜರ ಹಣೆಬರಹ ನಾವು ನೋಡಿಲ್ಲವೇ? ಅವರೆಲ್ಲಾ ಏನಾಗಿ ಹೋದರು ಎಂದು ಸಮಾಧಿಯೆಡೆ ಕೈ ತೋರಿಸಿ ನಗೆಯಾಡುತ್ತಿದ್ದವು. ಆಗ ನಾನು ಇತಿಹಾಸದ ಬಗ್ಗೆ ನಾಚಿಕೆಪಟ್ಟು ತಲೆತಗ್ಗಿಸಿ, ಮರುಕ್ಷಣ ಹಿಂದೆ ನೋಡದೆ ಹೆಜ್ಜೆ ಹಾಕಿದೆ.

ಆದರೂ ಹಂಪೆಯ ಬಗ್ಗೆ ಹೆಮ್ಮೆ ಇತ್ತು, ಕಳವಳಿ ಬಂತು 🙂 ಬನ್ನಿ ನೋಡ ಬನ್ನಿ ನಮ್ಮ ಸಾಂಸ್ಕೃತಿಕ ಹಂಪೆಯ ನೋಡ ಬನ್ನಿ ಎಂದು ಎಲ್ಲರಿಗೂ ಕರೆ ಕೊಡುವ ಉತ್ಸಾಹ ಮಿತಿಮೀರಿತ್ತು. ಹೌದು ಕಣ್ರೀ, ಹೋಗಿ ನೋಡಿ ಬನ್ನಿ ಒಮ್ಮೆಯಾದರೂ, ನಮ್ಮೀ ಹಾಳು ಹಂಪೆಯನ್ನ; ಕ್ಷಮಿಸಿ ಪರಂಪರೆಯ ಹಂಪೆಯನ್ನ. ನೀವು ರಾಜರಾಗಿ ಮೆರೆದು ಬನ್ನಿ 🙂

ಜೈ ಭುವನೇಶ್ವರಿ 🙂 , ಜೈ ಕರ್ನಾಟಕ. 🙂

ಇಂತಿ ನಿಮ್ಮವ;
@ Triple K 🙂

Advertisements

Published by

Triple K

ಹಾಗೇ ಸುಮ್ಮನೇ; ಚೂರು ಮಾತು, ಜಾಸ್ತಿ ಹುಡುಗಾಟ, ಚೂರು ಕೋಪ, ಜಾಸ್ತಿ ಪ್ರೀತಿ, ಸಂದರ್ಭಕ್ಕೆ ಸರಿಯಾಗೋ ಅಷ್ಟು ಗಾಂಭೀರ್ಯ !! ಇದೆಲ್ಲದರ ಜೊತೆಗೆ ದೊಡ್ಡ ಕನಸು. ಅದರ ಮಧ್ಯೆನೇ ಜೀವನದ ಸಣ್ಣ - ಪುಟ್ಟ ಅನುಭವಗಳನ್ನು ದೊಡ್ಡ ಖುಷಿಯಿಂದ ಆಚರಿಸೋ ಸ್ನೇಹಜೀವಿ ♥ ಒಟ್ಟಿನಲ್ಲಿ ಬದುಕಿನ ಬಯಲು ದಾರಿಯ ಅಲೆಮಾರಿ, ಮತ್ತೆ ಪ್ರತಿಕ್ಷಣವೂ ಅದರ ಗುರುವಿನ ವಿಧ್ಯಾರ್ಥಿ! ಹೀಗೆ ಅನ್ನಿಸಿದ್ದು, ಕಂಡಿದ್ದನ್ನ ಗೀಚೋ ಅಭ್ಯಾಸ ♥ ಸಂಭ್ರಮಿಸುವ ರೀತಿ, ಅನಿಸಿದ ಅನಿಸಿಕೆ, ಮನಕಳುಕುವ ತಳಮಳಗಳ ಹೆಸರು, ಅವುಗಳ ಉಸಿರು ಮೂಲೆ ಸೇರಬಾರದ್ದು ಅಂತ ಅದಕ್ಕೊಂದು ಪುಟ್ಟ ವೇದಿಕೆ ಕಲ್ಪಿಸ್ತಾ ಇದೀನಿ. :) ಅದುವೇ “ಅಪಧಮನಿ”, ಭಾವದ ಬದುಕಿನ ಬಯಲು ದಾರಿ ಅಲೆಮಾರಿಯ ಪ್ರಯಾಣದ ಹಾದಿ!!

ನಿಮ್ಮ ಅನಿಸಿಕೆ ತಿಳಿಸಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s