ಆಗ – ಈಗ

ನೀ ನಡೆದಾಗ
ನನ್ನ ಜೊತೆ
ಹೆಜ್ಜೆ ಹಾಕಿದಾಗ
ನನ್ನೀ ನಗು
ಪುಟಿದಿತ್ತು.

ನಿನಗಾಗಿ ಕೊಟ್ಟ
ಆ ನಸುನಗು
ನಿನ್ನ ನೋಡಿದಾಗ
ವದನ ಸೇರಿದಾಗ
ನಗುವಾಗಿತ್ತು
ಅವಾಗ; ನನಗೆ.

ನೀ ನಡೆದಾಗ
ನನ್ನ ಬಿಟ್ಟು
ಹೆಜ್ಜೆ ಹಾಕಿದಾಗ
ನನ್ನೀ ನಗು
ನಿಂತ್ತಿತ್ತು.

ನಿನಗಾಗಿ ಕಾಪಿಟ್ಟ
ಆ ಶುಭ್ರನಗು
ನಿನ್ನ ನೆನೆದಾಗ
ವದನ ಆವರಿಸಿದಾಗ
ಅಳುವಾಗಿತ್ತು
ಇವಾಗ; ನನಗೆ.

@ Triple K 🙂

ಹೊಸ ಹವಾ!!

ಹೊಸ ಹವಾ!!

ದಿನ ಕಳೆದಿದೆ
ಗಂಟೆ ಉರುಳಿದೆ
ಆದರೂ ಚಿತ್ತ
ಕದಲಿದೆ.

ಹಾದಿ ಕಂಡಿದೆ
ಮನಸ್ಸು ಓಡಿದೆ
ಹೇಗೋ ದಿನ
ದೂಡಿದೆ.

ಅಂತರಂಗ ಉಸುರಿದೆ
ಅರಿವು ಹುದುಗಿದೆ
ಏಕೋ ಸ್ವಇಚ್ಛೆ
ಹೊಣೆಯಾಗಿದೆ.

ಬವಣೆ ನುಡಿದಿದೆ
ಗ್ರಹಿಕೆ ತೋರಿದೆ
ಮತ್ತೆ ಅಂತಃಕರಣ
ಚುರುಗುಟ್ಟಿದೆ.

ಮೌನ ಮುರಿದಿದೆ
ಮಾತೂ ನಿಂತಿದೆ
ಯಾವುದೋ ಗಾಳಿ
ಬೀಸಿದೆ.

@ Triple K 🙂

ಪಯಣಿಗ..,

ಪಯಣಿಗ..,

ಸಾವಿರ ದಾರಿಗಳ
ಸಾವಿರ ಬಂಧನ
ಇನ್ನು ಕಾಡುತಿವೆ
ಚಿರಂತನ.

ನೀ ಬರುತ್ತೀಯೋ
ನಾವೇ ಬರಲೋ
ಎನ್ನುತಿವೆ
ಪ್ರತಿಕ್ಷಣ.

ಎನಿತೋ ಭಾವದ
ಮರುಕುವ ಒಡಲು
ತುಂಬಿ ಬಂದಿತ್ತು
ಹಾದಿಯುದ್ದಕ್ಕೂ.

ನೀ ನಡೆಸಿದ ಪಥದಲ್ಲಿ
ನಾ ನಡೆದ ದಾರಿಯಲ್ಲಿ
ಆನಂದ ಹೊಕ್ಕಿತ್ತು
ನೆನಪಿನಾಳಕ್ಕೂ.

ಮನಸ್ಸು ಅಳುಕ್ಕಿತ್ತು
ಸ್ಮೃತಿಶಕ್ತಿ ತುಂಬಿತ್ತು
ಆದರೂ ದಾರಿ
ನಡೆಸಿತ್ತು.

ನಾನು ನಡೆದಿದ್ದೆ
ನೀನು ನಡೆಸಿದ್ದೆ
ನೀನ್ನಿಲ್ಲದೆ ದಾರಿ
ತೋರಿಸಿದ್ದೆ.

@ Triple K 🙂

ಈಗೊಂದು ನಿ”ವೇದನೆ” !?

ಆತ್ಮೀಯ ಅನಾಮಿಕರವರಿಗೆ..,

ಪ್ರೀತಿಯ ನಮಸ್ಕಾರ, ಅಭಿನಂದನಾಪೂರ್ವಕ ವಂದನೆಗಳು. 🙂

ಬಹಳ ದಿನಗಳ ನಂತರ ಪತ್ರ ಬರೀಬೇಕು ಅಂದುಕೊಂಡಾಗ ಕಾರಣಗಳ ಪಟ್ಟಿಯೇ ನನ್ನ ಮುಂದೆ ಬಂದವು. ಏಕೆಂದರೆ ನಿನ್ನ ಹತ್ತಿರ ಸಾವಿರ ಮಾತಾಡಬೇಕು ಎಂದು ನಾನು ಬಂದಾಗ, ಇತ್ತೀಚಿನ ನಿನ್ನ ಮುಗ್ದ ಮೌನ ನನ್ನನ್ನ ಮಾತಾಡುವುದಕ್ಕೆ ಬಿಡದೇ ಕಾಡುತ್ತದೆ. ಅದಕ್ಕೇ ಈ ಪತ್ರದ ಮೊರೆ ಹೊಕ್ಕಿದ್ದೇನೆ, ಎಲ್ಲವನ್ನೂ ಮಾತಿನಲ್ಲೇ ಹೇಳೋದಕ್ಕೆ ಕಷ್ಟವಾಗುವ ಕಾರಣ. 🙂

ಪರಿಚಿತನಾದ ಈ ಅಪರಿಚಿತನ ಹಿಂದೆ ತುಂಬಾ ದೂರ ಪ್ರಯಾಣ ಮಾಡಿ, ಇವಾಗ ಬಿಟ್ಟುಹೋಗುತ್ತೇನೆಂಬ ನಿನ್ನ ವೃತ್ತಿಪರತೆಯು ಎಷ್ಟರ ಮಟ್ಟಿಗೆ ಸರಿ ಎಂಬುದು ಯಾವ ಜಗತ್ತಿನ ನ್ಯಾಯನೋ?? ಜೀವನದ ನೋವು-ನಲಿವು, ಸುಖ-ದುಃಖ, ಭೂತ-ಭವಿಷ್ಯ,ವರ್ತಮಾನದ ಪ್ರತಿಯೊಂದು ಕ್ಷಣಗಳನ್ನ ವಿಚಾರಿಸಬೇಕಾದವಳು ನಡುದಾರಿಯಲ್ಲಿ ಬಿಡುತ್ತೇನೆಂಬ ಆಶ್ವಾಸನೆಗಳ ಸುಳಿಯಲ್ಲಿ ಸಿಕ್ಕಿಸಿ ಖುಷಿಪಡುವುದರಲ್ಲಿ ಎಷ್ಟು ಸುಖವಿದಿಯೇ ಗೆಳತಿ? 🙂

ನೀನಾದೆ ಬಾಳಿನ ಜ್ಯೋತಿ, ನಾ ಕಂಡೇ ಕಾಣದ ಪ್ರೀತಿ.

ನಿನ್ನನ್ನು ಅರ್ಥ ಮಾಡಿಕೊಳ್ಳೋದೆ ಕಷ್ಟವಾಗಿದೆ, ನನ್ನನ್ನು ಅರ್ಥ ಮಾಡಿಕೊಂಡು ಬೇಕೆಂತಲೇ ಕಾಡುತ್ತಿಯೋ, ಇಲ್ಲ ತಿಳಿದು ತಿಳಿಯದಂತೆ, ಅಥವಾ ಅರ್ಥವಾಗದೆ ಕಾಡುತ್ತಿಯೋ ನನಗೆ ತಿಳಿಯದು. ನಿಜವಾಗಿಯೂ ಹೇಳ ಹೆಸರಿಲ್ಲದಂತೆ ನೋವನ್ನು ಕಂಡಿದ್ದೇನೆ. ನಿನ್ನ ಪರಿಚಯವಾದ ಮೇಲೆನೇ ಎಲ್ಲವನ್ನು ನಿಭಾಯಿಸೋದು ಕಲಿತ್ತಿದ್ದು. ಪ್ರತಿಕ್ಷಣವನ್ನ ಖುಷಿಯಿಂದ ಕಳೆಯೋದು ಕಲಿತ್ತಿದ್ದು. ಆದರೆ ಈಗಿನ ನನ್ನ ಪರಿಸ್ಥಿತಿಯ ಅವಲೋಕನ ಕ್ಷಮೆಯಾಧಾರಿತ. 🙂

ಪ್ರತಿ ಹೆಜ್ಜೆಯಲ್ಲೂ ಸೋಲೆಂಬುದು ಬಿದ್ದು ಒದ್ದಾಡುತ್ತಿರುವಾಗ, ನಾ ಆಯ್ಕೆ ಮಾಡಿದ ಕಣ್ಣುಗಳು ನನ್ನನ್ನೇ ಗುರಿತಿಸಲು ಸೋಲುವುದು ಅತಿಶಯೋಕ್ತಿಯೇನಲ್ಲ. ಆದರೆ ಮತ್ತೆ ಆ ಕಣ್ಣುಗಳನ್ನು ಹುಡುಕುವುದರಲ್ಲಿ ಅರ್ಥಾನೇ ಇಲ್ಲ ಅನ್ನಿಸಿದೆ ಕಣೇ ಗೆಳತಿ. 🙂

ನೆನ್ನೆಯ ನೆನಪುಗಳೇ ಇಂದಿನ ಭರವಸೆಯೂ
ನಾಳೆಯ ಕನಸುಗಳೇ ಇಂದಿನ ನಂಬಿಕೆಯೂ.

ಹುಚ್ಚು ಕುದುರೆಯಂತೆ ಓಡೋ ಮನಸನ್ನ ನನಗೆ ಹಿಡಿದು ಹಿಡಿದು ಸಾಕಾಗಿದೆ. ನಿಜ ಹೇಳಬೇಕೆಂದರೆ ಸಾವಿರಾರು ಮೈಲುಗಳನ್ನು ಮಿತಿಮೀರಿ ಓಡಿದೆ. ಪ್ರತಿಕ್ಷಣವೂ, “I don’t have anything hell here to do” ಅಂತ ಅನಿಸುತ್ತೆ. ಆದರೂ ಜಗತ್ತು ವಿಶಾಲವಾಗಿದೆ; ಸಾವಿರಾರು ಮೈಲುಗಳ ನನ್ನ ಪಯಣ ಸಾಕಷ್ಟು ಕಥೆಗಳನ್ನ ಹೇಳಿಕೊಟ್ಟಿದೆ. ನಾನು ಕಲಿತ್ತಿದ್ದೇನೆ, ಏನು ಇಲ್ಲದೆ ನೆಪ ಹೇಳಿಕೊಂಡು ಬದುಕುವುದನ್ನ. 🙂

“ಸಾವಿರಾರೂ ಮೈಲುಗಳ ಕಥೆಗಾರ ನೀನು, ಸಾಧಿಸೋದು ತುಂಬಾನೇ ಇದೆ ನಿನಗೆ”, ಎಂಬ ಹೊಸ ನೆಪವನ್ನ ಬದುಕಿನ ಗುರು ಕಾಲಮುಂದೆ ಎಸೆದಿದ್ದು, ಅದನ್ನ ಎತ್ತಿಕೊಂಡು ಮುಂದುವೆರೆಯುತ್ತಿದ್ದೇನೆ, ಹಿಂದೆ ನಿನ್ನ ನೋಡದೇ!!? 🙂

ಹೀಗೆ ನಾನು ಮತ್ತೆ ಮತ್ತೆ ನಿನ್ನ ನೆನಪುಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗಲೆಲ್ಲ, ನಿನ್ನ ನೆನಪನ್ನುಂಡು, ನೆನಪನ್ನೇ ಹಾಸಿ, ನೆನಪನ್ನೇ ಹೊದ್ದು ಮಲಗಿ, ನೆನಪನ್ನೇ ಕನವರೆಸಿ ನೊಂದುಕೊಂಡಿದ್ದೇನೆ. ನಿನ್ನ ನೆನಪಿನಿಂದ ಬದುಕಲು ಕಲಿತಿದ್ದೇನೆ. ಅವುಗಳೆಲ್ಲದರ ಜೊತೆಗೆ ಇವಾಗ ಹೊಸ ನೆಪವನ್ನ ಬದುಕಿನ ಬಯಲು ದಾರಿಯಲ್ಲಿ ಕರೆದೊಯ್ಯಲು ಅಣಿಯಾಗಿದ್ದೇನೆ, ನಿನ್ನ ನಿಲುವಿನ ಮೇರೆಗೆ!! 🙂

ಹೊಸ ದಾರಿ

ಕೊನೆಯಲ್ಲಿ ನಿನ್ನ ಹೊಸ ದಾರಿ ಶುಭಾವಾಗಿರಲೆಂದು ಹಾರೈಸುತ್ತ,  ಶುಭಾಶಯ ಕೋರುತ್ತಿದ್ದೇನೆ!! 🙂

ಇಂತಿ ನಿನ್ನ ಪ್ರೀತಿಯ;
ಅನಾಮಿಕ 🙂

ವಿಜಯನಗರ ಸಾಮ್ರಾಜ್ಯದ ಹಂಪೆಯ ಒಂದು ನೋಟ !!

ಒಂದು ತಟದಲ್ಲಿ ಹರ್ಷದಿ ನಲಿನಲಿಯುತ್ತ ಹರಿದು, ಹರಿಹರರಿಗೆ ನಮಿಸುತ್ತಾ, ವಿರುಪಾಕ್ಷನಿಗೆ ಅಭಿಷೇಕ ಮಾಡಿ, ಕಷ್ಟದ ಮನದಲ್ಲೇ ತವರ ತೊರೆದು, ಕೃಷ್ಣನ ಸೇರ ಹೊರಟಿರುವ ತುಂಗಭದ್ರೆ, ಅದರ ಸುತ್ತ ಸಾವಿರಾರು ವರ್ಷಗಳ ಕಥೆ ಹೇಳುವ ಕಿಷ್ಕಿಂದೆಯ ಬೆಟ್ಟದ ತಪ್ಪಲು. ಹೀಗೆ ಶತ್ರುಗಳ ಆಕ್ರಮಣಕ್ಕೆ ಕಷ್ಟವೆನಿಸುವ ಸ್ಥಳ. ಇವೆಲ್ಲದರ ನಡುವೆ ಅದಕ್ಕೆ ವೈಭವದ ಹಿಂದೂ ಸಾಮ್ರಾಜ್ಯದ ರಾಜಧಾನಿಯ ಪಟ್ಟಕ್ಕೇರುವ ಅವಕಾಶ. ಯಾರಿಗುಂಟೂ ಯಾರಿಗೆ ಬೇಡ ಆ ಸೌಭಾಗ್ಯ?!! 🙂

ಮೇಲಿನ ನಾಲಕ್ಕು ಸಾಲು ಓದಿದ ಮೇಲೆ ಯಾರಿಗಾದರೂ ತಟ್ಟನೆ ಹೊಳೆಯುತ್ತೆ, ಹಿಂದೂ ಸಂಸ್ಕೃತಿಯ ದ್ಯೋತಕದಂತಿರುವ ಹಂಪೆಯ ಬಗ್ಗೆ ಹೇಳ ಹೊರಟ್ಟಿದ್ದೇನೆ ಎಂದು. ಮೂರು ದಿನ ನನ್ನ ಕಾಲಿಗೆ ಚಕ್ರ ಕಟ್ಟಿರೋ ತರ ಹಂಪೆಯ ಉದ್ದಗಲಕ್ಕೂ ತಿರುಗಿದ ಪರಿಣಾಮ ಈ ಲೇಖನ. ಇಲ್ಲ ಅಂದ್ರೆ ಸಂಭ್ರಮಿಸಿದ ರೀತಿ, ಅನಿಸಿದ ಅನಿಸಿಕೆ, ಮನಕಳುಕಿದ ತಳಮಳ ಮೂಲೆ ಸೇರುತ್ತೆ; ಅದಕ್ಕೆ ದಾಖಲಿಸುತ್ತಿದ್ದೇನೆ. 🙂

ವಿಶ್ವ ಪರಂಪರೆಯ ತಾಣ, ಹಂಪೆ

ಹೌದು ಕಣ್ರೀ, ಮಧ್ಯಯುಗದ ದಕ್ಷಿಣಭಾರತದ ವಿಜಯನಗರ ಸಾಮ್ರಾಜ್ಯದ ವೈಭವದ ರಾಜಧಾನಿ ಈಗಿನ ಆಗಿನ ಹಂಪೆ. ಪ್ರತಿಯೊಂದು ಕಲ್ಲು ಒಂದೊಂದು ಕತೆ ಹೇಳುವ ಶಿಲ್ಪಕಲೆಯ ಲೋಕ. ಹೊಯ್ಸಳ ಮತ್ತು ಚೋಳರ ಮನಮೋಹಕ ಸಾಂಪ್ರದಾಯಿಕ ವಾಸ್ತುಶಿಲ್ಪದ ಮುಂದುವರೆದ ಅವತರಣಿಕೆ. ಒಂದು ಕಾಲದಲ್ಲಿ ವೈಭವದಿಂದ ಮೆರೆದ ಹಂಪೆ ಈಗ ಗತವೈಭವವನ್ನು ಸಾರಲು ತುಂಗಭದ್ರೆಯ ಮಡಿಲಲ್ಲಿ ನೆನಪುಗಳನ್ನೇ ಹೊದ್ದು ನೆನಪುಗಳನ್ನೇ ಹಾಸಿ ಮಲಗಿದೆ, ಸುಮಾರು ೨೬ ಚದರ ಕಿ.ಮೀ. ವಿಸ್ತಾರದಲ್ಲಿ, “ವಿಶ್ವ ಪರಂಪರೆಯ ತಾಣ” ಎಂಬ ಹೆಸರಿನೊಂದಿಗೆ. ಆರಾಧ್ಯದೈವ ವಿರೂಪಾಕ್ಷಪ್ಪ ಅಲ್ಲಿಯೇ ನೆಲೆನಿಂತ್ತಿದ್ದಾನೆ, ಹಂಪೆಯ ಹಾಗುಹೋಗೂಗಳ್ಳನ್ನ ತನ್ನ ಕಣ್ಣಿನಿಂದ ನೋಡುತ್ತಾ, ಕಾಯುತ್ತಾ, ವಿರಮಿಸುತ್ತಾ !!??. 😉

ಜಗತ್ತಿನ ಅತಿದೊಡ್ಡ ಬಯಲಿನ ವಸ್ತುಸಂಗ್ರಹಾಲಯ ನಮ್ಮ ಹಂಪೆ. ಕೇಂದ್ರೀಕೃತವಾದ ಶ್ರೀ ವಿರುಪಾಕ್ಷಾ ದೇವಾಲಯ, ಅಚ್ಯುತರಾಯ ದೇವಾಲಯ, ವಿಜಯವಿಠ್ಠಲ ದೇವಾಲಯ, ಹೇಮಕೂಟ, ಪುರಂದರ ಮಂಟಪ, ವಜ್ರ ವೈಢೂರ್ಯವನ್ನ ಮಾರುತ್ತಿದ್ದರೆನ್ನಲಾದ ಬೀದಿ, ವಿಶ್ವವಿಖ್ಯಾತ ಕಲ್ಲಿನ ರಥ, ಅನೆ ಲಾಯ, ಒಂಟೆ ಸಾಲು, ಕಪ್ಪು ಶಿಲೆಯ ಪುಷ್ಕರಣಿ, ಉಗ್ರನರಸಿಂಹ, ಸಾಸಿವೆಕಾಳು ಗಣಪ, ಕಡಲೆಕಾಳು ಗಣಪ, ಅಂಜನಾದ್ರಿ ಪರ್ವತ, ಅರಮನೆಯ ಅವಶೇಷ, ರಾಣಿಯರ ಸ್ನಾನಗೃಹ, ಹಜಾರರಾಮ ದೇವಾಲಯ, ಬಡವಿಲಿಂಗ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಬಗಳು, ಮಹಾನವಮಿ ದಿಬ್ಬ, ಅನೇಕ ನೀರು ಸಂಗ್ರಹಿಸುವ ತೊಟ್ಟಿಗಳು, ಕಮಲ ಮಹಲು, ಚಂದ್ರಮೌಳೇಶ್ವರ ದೇವಾಲಯ, ನೆಲಮಾಳಿಗೆ ದೇವಾಲಯ, ಬಾಲಕೃಷ್ಣ ದೇವಾಲಯ, ಜೊತೆಗೆ ಸಾಮ್ರಾಜ್ಯ ಪತನಗೊಂಡಿದ್ದರಿಂದ ಕಾಮಗಾರಿ ಸ್ಥಗಿತಗೊಂಡು ಕೆಲವು ಭಾಗಗಳು ಅಪೂರ್ಣವಾಗಿ ಉಳಿದಿರುವ ಕಟ್ಟಡಗಳು, ಹೀಗೆ ಹತ್ತು ಹಲವು ವಿಜಯನಗರ ಸಾಮ್ರಾಜ್ಯದ ಅವಶೇಷಗಳನ್ನು ತನ್ನ ಒಡಲಲ್ಲಿಟ್ಟುಕೊಂಡು ಸಂಭ್ರಮಿಸುತ್ತಿದೆ ಹಾಳು ಹಂಪೆ. 🙂

ವಿಜಯನಗರ ಸಾಮ್ರಾಜ್ಯ

ವಿಜಯನಗರ ಸಾಮ್ರಾಜ್ಯ. ಚಿತ್ರ ಕೃಪೆ: ಅಂತರ್ಜಾಲ

ಈ ರೀತಿ ಸಂಭ್ರಮಿಸಲು ಕಾರಣ, ವೈಭವದ ವಿಜಯನಗರ ಸಾಮ್ರಾಜ್ಯದ ಪತನ. 😦

ಹೀಗೆ ಕಾಲನ ಕಾಲ ಬುಡದಲ್ಲಿ ಮಂಡಿಯೂರಿಕೊಂಡು ಬಿದ್ದು ಹೋಗಿರುವ ಸಾಮ್ರಾಜ್ಯ ವೈಭವದಿಂದ ಮೆರೆಯಲು, ಸಂಪೂರ್ಣ ಡೆಕ್ಕನ್ ಪ್ರಸ್ತ ಭೂಮಿಯನ್ನು ವಿಸ್ತರಿಸಲು ತೆಗೆದುಕೊಂಡ ಸಮಯ ಸರಿಸುಮಾರು ೨೦೦ ವರ್ಷಗಳು, ಅಂದರೆ ಸ್ತಾಪನೆಗೊಂಡು ೨೦೦ ವರ್ಷಗಳ ನಂತರ, ಅದು ಶ್ರೀ ಕೃಷ್ಣದೇವರಾಯನ ಅವಧಿಯಲ್ಲಿ.  ಕಾರಣ?? ಅಗತ್ಯಕ್ಕಿಂತ ಹೆಚ್ಚಿನದಾಗಿ ಸಿಕ್ಕ ಸಂಪನ್ಮೂಲಗಳು!! ವ್ಯವಸ್ತಿತ ತುಂಗಭದ್ರೆಯ ಸುತ್ತಲಿನ ಕೃಷಿಯ ಹಸಿರುಕ್ರಾಂತಿ, ಶ್ರೀಗಂಧ, ಚಿನ್ನ-ವಜ್ರದ ನಿಕ್ಷೇಪ, ಮಸಾಲೆ ಪದಾರ್ಥ, ಯುರೋಪಿನಿಂದ ಬಂದಂತಹ ಸವಲತ್ತು, ಅವರೊಂದಿಗಿನ ವ್ಯವಹಾರ, ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಬಲಗೊಂಡ ಸೈನಿಕಸೇನೆ, ಅಭ್ಯುದಯಕ್ಕೆ ಕಾರಣ. ಇವೆಲ್ಲವುದರ ಜೊತೆಗೆಯೇ ಮಾಲಿಕ್ ಕಫೂರನ ದಕ್ಷಿಣದ ಕಡೆಗಿನ ಅರ್ಭಟವೂ ಭೌಗೋಳಿಕವಾಗಿ ವಿಜಯನಗರ ವಿಸ್ತಾರವಾದುದರ ಮತ್ತೊಂದು ಮಜಲು. 🙂

ಈ ರೀತಿಯಲ್ಲಿ ವಿಸ್ತಾರವಾದ ಸಾಮ್ರಾಜ್ಯ ಕೇವಲ ೪೦ ವರ್ಷಗಳ ಅಲ್ಪಾವಧಿಯಲ್ಲಿಯೇ ನೆಲಕಚ್ಚಲು ಕಾರಣವಾದರೂ ಏನು?? ವೈಭವದ ಕುರುಹು ಎಷ್ಟೇ ಸತ್ಯಾಸತ್ಯತೆಯಿಂದ ಕೂಡಿದ್ದರೂ, ಸಾಮ್ರಾಜ್ಯವೆಂದ ಮೇಲೆ ಅದರ ಜೊತೆಜೊತೆಗೆ ಇದ್ದಂತಹ ದೇವದಾಸಿ ಪದ್ಧತಿ, ಬಾಲ್ಯವಿವಾಹ, ನವರಾತ್ರಿ ಉತ್ಸವದಲ್ಲಿ ಕುರಿ-ಕೋಣಗಳ ಬಲಿ, ಅಧಿಕಾರ ದಾಹ, ಹಣಕ್ಕಾಗಿ ಕ್ರೌರ್ಯ, ಕೃತಿಮತೆ, ಬಂಧುಗಳಿಗೆ ವಿಷ ಉಣಿಸುವ ಕೃತ್ಯ, ಶತ್ರುಗಳ ಜೊತೆ ಒಳ ಒಪ್ಪಂದ, ಅರಮನೆಯ ಪಿತೂರಿ, ಆಹಂ, ಕಾಮವಾಂಛೆ, ಸಾಮ್ರಾಜ್ಯಶಾಹಿ ಪ್ರಭುತ್ವದ ಕೊಳ್ಳೆ, ಆಕ್ರಮಣ, ತೆರಿಗೆ ಸುಲಿಗೆ, ಅಂತರಿಕ ಮೌಡ್ಯಗಳು ಕೂಡ ವಿಜಯನಗರದ ವಿಮರ್ಶೆಗೆ ಅರ್ಹವಾದುವು. ಒಂದುಗೂಡಿದ ಸುಲ್ತಾನರೊಂದಿಗಿನ ರಕ್ಕಸತಂಗಡಿಯ ಯುದ್ಧದ ಜೊತೆ ಇಂತಹ ನೈತಿಕ ಅದಃಪತನ ಕೂಡ ಸಾಮ್ರಾಜ್ಯದ ಪತನಕ್ಕೆ ಕಾರಣವಾಯಿತೇನೋ?! 😦

ಇಂತಹ ಸಂದರ್ಭ ಕಲಿಸುವುದಾದರೂ ಏನು?? ನಮ್ಮ ಸೋಲಿಗೆ ಶತ್ರುಗಳ ಪರಾಕ್ರಮ ಮುಖ್ಯವಾದುದಲ್ಲ, ನಮ್ಮೊಳಗಿನದೇ ಆದಂತಹ ಆಂತರಿಕ ದೌರ್ಬಲ್ಯ ಮುಖ್ಯಭೂಮಿಕೆಯಾಗಿ ಉಳಿದುಬಿಡುತ್ತದೆ. ಹೌದೂ ಕೂಡ!! ಇದೇನು ಭಾರತದ ಇತಿಹಾಸದಲ್ಲಿ ಹೊಸದಲ್ಲ. ಇತಿಹಾಸದುದ್ದಕ್ಕೂ ಪುನಃ ಪುನಃ ನಡೆಯುತ್ತಲೆ ಬಂದಿದೆ. ಭಾರತದ ಇತಿಹಾಸ ಭಾರತಕ್ಕೆ ಏನನ್ನು ಕಲಿಸಿಲ್ಲದಿರುವುದು ಸೋಜಿಗದ ವಿಷಯವೆ ಸರಿ 😦

ಹಂಪೆಯ ಇತಿಹಾಸ ಅದೇನೇ ಇರಲಿ. ಅದು ಕರ್ನಾಟಕದ ಭಾಗವಾಗಿರುವುದು ನಮ್ಮೆಲ್ಲರ ಪುಣ್ಯವೇ ಸರಿ 🙂 ಅದರ ವ್ಯವಸ್ತಿತ ನಿರ್ವಹಣೆ, ಸಂಸ್ಕೃತಿಯ ಪೋಷಣೆ ನಮ್ಮೆಲ್ಲರ ಹೊಣೆ. ಸಾಂಸ್ಕೃತಿಕ ಹಂಪೆಯ ನಾಶಕ್ಕೆ ಸುಲ್ತಾನರು ಹೇಗೆ ಹೊಣೆಗಾರರೋ, ಹಾಗೆಯೇ ನಮ್ಮ ಜನರ ಪಾಲುಗಾರಿಕೆ ಕೂಡ ಇದೆ. ಯುದ್ದದಲ್ಲಿ ಆದ ನಾಶಕ್ಕಿಂತ ಆನಂತರದಲ್ಲಿ ಹೆಚ್ಚು ನಾಶ ಆಗಿದೆ. ನಿಧಿಯ ಆಸೆ, ಪ್ರಾಚೀನವಸ್ತುಗಳ ವ್ಯವಹಾರ ಅಲ್ಲಿಯವರನ್ನ ನಾಶ ಕಾರ್ಯಕ್ಕೆ ಪ್ರಚೋದಿಸುತ್ತಿದೆ. ಅವರಿಗೆ ಹಂಪೆಯ ಮಹತ್ವದ ಪರಿಚಯ ಮಾಡಿಸಿ ಪ್ರಾಚೀನ ಅವಶೇಷಗಳ ಸಂರಕ್ಷಣೆ ಮುಖ್ಯವಾಗಿದೆ. ಪುರಾತತ್ವ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಕಾರ್ಯ ವೈಖರಿ ಮೆಚ್ಚಬೇಕ್ಕಾದ್ದೆ. ಉತ್ತಮವಾದ ರೀತಿಯಲ್ಲಿಯೇ ಕಾರ್ಯಾ ನಿರ್ವಹಿಸುತ್ತಿದ್ದಾರೆ. ಆದರೆ ಅದು ಶೀಘ್ರಗತಿಯಲ್ಲಿ ಸಾಗಿದರೆ ಇನ್ನು ಉತ್ತಮ. ಎಲ್ಲ ಅವಶೇಷಗಳನ್ನು ಸಂರಕ್ಷಿಸಬಹುದು ಎನ್ನುವ ಮಹದಾಸೆಯೊಂದಿಗೆ!! 🙂

ಇಂದು ನಮ್ಮ ಹಂಪೆ ಪ್ರತಿನಿತ್ಯ ಸಾವಿರಾರು ಭಾರತೀಯರು ಸೇರಿದಂತೆ ವಿದೇಶೀಯರು ಬಂದುಹೋಗುವ ಪುಣ್ಯಕ್ಷೇತ್ರ. ಅದಕ್ಕೋಸ್ಕರ ಉತ್ತಮ ರಸ್ತೆ, ಸಮಯಪಾಲಿತ ಸಾರಿಗೆ ವ್ಯವಸ್ಥೆ, ಸೂಚನಾ ಫಲಕ, ದೇವಾಲಯಗಳ ನಿರ್ವಹಣೆ, ರಾತ್ರಿಯಲ್ಲಿ ಬೆಳಕಿನ ವ್ಯವಸ್ಥೆ, ಅನೈತಿಕ ಚಟುವಟಿಕೆಗಳಿಗೆ ಕಡಿವಾಣ, ಜೊತೆಗೆ ತುಂಗಭದ್ರೆಯ ನೆರೆಹಾವಳಿಯ ನಿರ್ವಹಣೆ ಹಂಪೆಯ ವ್ಯವಸ್ಥಾಪನೆಯ ಮೂಲಮಂತ್ರವಾಗಲಿ. 🙂

ಕಲ್ಲಿನ ರಥ, ಹಂಪೆ

ನನ್ನ ಪ್ರಯಾಣ, ಅನುಭವ, ಅನಿಸಿಕೆ ಹೀಗೆ ಸಾಗುತ್ತೆ!! ನಾನ್ನಂತು ಹಂಪೆಯ ಉದ್ದಗಲಕ್ಕೂ ಹೆಜ್ಜೆ ಹಾಕಿದೆ, ನಾನೇ ಹಂಪೆಯ ರಾಜ ಅನ್ನೋ ತರಹ 😛 ಹೀಗೆ ರಾಜಗಾಂಭೀರ್ಯದಿಂದ ಸಾಗುವಾಗ; ಹಂಪೆಯ ಪ್ರತಿ ಕಲ್ಲು, ಬಂಡೆಗಳು, ಭಗ್ನಗೊಂಡು ಇತಿಹಾಸಕ್ಕೆ ಸಾಕ್ಷಿಯಾದ ಸ್ಮಾರಕಗಳು ತಮ್ಮ ತಮ್ಮಲ್ಲಿ ಪಿಸುಗುಡುತ್ತಾ ಇಂತಹ ಎಷ್ಟೋ ರಾಜರ ಹಣೆಬರಹ ನಾವು ನೋಡಿಲ್ಲವೇ? ಅವರೆಲ್ಲಾ ಏನಾಗಿ ಹೋದರು ಎಂದು ಸಮಾಧಿಯೆಡೆ ಕೈ ತೋರಿಸಿ ನಗೆಯಾಡುತ್ತಿದ್ದವು. ಆಗ ನಾನು ಇತಿಹಾಸದ ಬಗ್ಗೆ ನಾಚಿಕೆಪಟ್ಟು ತಲೆತಗ್ಗಿಸಿ, ಮರುಕ್ಷಣ ಹಿಂದೆ ನೋಡದೆ ಹೆಜ್ಜೆ ಹಾಕಿದೆ.

ಆದರೂ ಹಂಪೆಯ ಬಗ್ಗೆ ಹೆಮ್ಮೆ ಇತ್ತು, ಕಳವಳಿ ಬಂತು 🙂 ಬನ್ನಿ ನೋಡ ಬನ್ನಿ ನಮ್ಮ ಸಾಂಸ್ಕೃತಿಕ ಹಂಪೆಯ ನೋಡ ಬನ್ನಿ ಎಂದು ಎಲ್ಲರಿಗೂ ಕರೆ ಕೊಡುವ ಉತ್ಸಾಹ ಮಿತಿಮೀರಿತ್ತು. ಹೌದು ಕಣ್ರೀ, ಹೋಗಿ ನೋಡಿ ಬನ್ನಿ ಒಮ್ಮೆಯಾದರೂ, ನಮ್ಮೀ ಹಾಳು ಹಂಪೆಯನ್ನ; ಕ್ಷಮಿಸಿ ಪರಂಪರೆಯ ಹಂಪೆಯನ್ನ. ನೀವು ರಾಜರಾಗಿ ಮೆರೆದು ಬನ್ನಿ 🙂

ಜೈ ಭುವನೇಶ್ವರಿ 🙂 , ಜೈ ಕರ್ನಾಟಕ. 🙂

ಇಂತಿ ನಿಮ್ಮವ;
@ Triple K 🙂

ಮಳೆ ತಂದ ನೆನಪು!!!

ನಿನದೇ ನೆನಪು ದಿನವೂ ಮನದಲ್ಲಿ
ನೋಡುವಾ ಆಸೆಯು ತುಂಬಿದೆ ನನ್ನಲಿ, ನನ್ನಲೀ

ಹೌದು ಕಣೇ ಗೆಳತಿ!!! ನನ್ನ ಜೀವನದಲ್ಲಿ ನಿನ್ನ ನೆನಪಿಸಿಕೊಳ್ಳದೇ ಇರೋ ಸಮಯಾನೇ ಇಲ್ಲ 🙂 ನಿನಪು ಮಾಡಿಕೋ, ಆರು ವರ್ಷದ ಹಿಂದೆ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ನನಗೆ ಸಿಕ್ಕವಳು ನೀನು… ಸಂಪಿಗೆ ರಸ್ತೆ ಮಲ್ಲೇಶ್ವರಕ್ಕೆ ಹೇಗೆ ಸೊಗಸೋ ಹಾಗೆ ನೀ ನನ್ನ ಜೀವನಕ್ಕೆ ಸಂಪಿಗೆಯ ಘಮಲು 🙂

ನನಗೆ ಚೆನ್ನಾಗಿ ನೆನಪಿದೆ; ನಿನ್ನ ಪ್ರೀತಿಯಲ್ಲಿ, ನಿನ್ನ ಒಳ್ಳೆಯತನದಲ್ಲಿ, ನಿರಂತರ ಮಮತೆಯ ದೋಣಿಯಲ್ಲಿ ಕೊಚ್ಚಿ ಹೋದ ಹುಡುಗ ನಾನು… ನಿನ್ನೊಂದಿಗೆ ಕೂತು  ಮಾತಾಡುತ್ತ ಮೈಮರೆತಾಗ, ನೀನು ಹಾಗೆ ಉಳಿದು ಹೋದಾಗ ವಾರೆ ವಾಹ್!! ಇನ್ನು ಮುಂದೆ ಈ ಸಂಪಿಗೆ ಹುಡುಗಿ ನನ್ನವಳು ಅನಿಸಿತು 🙂

ಸಂಪಿಗೆ ರಸ್ತೆಯಲ್ಲಿ ಇಬ್ಬರು ಹೆಜ್ಜೆ ಹಾಕುತ್ತ, ನನ್ನ ತರಲೆ ಮಾತುಗಳಿಗೆ ನೀ ನನ್ನ ಕಿವಿ ಹಿಂಡುತ್ತಾ, ತಲೆ ಮೇಲೆ ದೊಡ್ದ ಕಪಿ ಎಂದು ಹೊಡೆಯುತ್ತಾ, ಅಬ್ಬಬ್ಬಾ ನೆನೆಸಿಕೊಂಡರೆ ಪ್ರೀತಿಯ ಸಾಗರದಲ್ಲಿ ಮುಳುಗಿಬಿಡ್ತೇನೆ ಕಣೇ ಸಂಪಿಗೆಯ ಮೂಗಿನವಳೇ, ನನ್ನ ಗೆಳತಿ!!

ಚಂದ್ರನ ಚೆಲುವಿಗೆ ಚಂದ್ರನೆ ಸಾಟಿ, ಹೋಲುವರಾರಿಲ್ಲಾ
ನಿನ್ನೀ ಅಂದಕೆ ನೀನೇ ಸಾಟಿ, ಬೇರೆ ಯಾರಿಲ್ಲ
ನಿನ್ನ ಹೋಲುವರಾರಿಲ್ಲ

ಹೀಗೆ ನಾ ನಿನ್ನ ನೋಡುತ್ತಾ, ಸ್ಯಾಂಕಿ ಕೆರೆಯ ದಡದಲ್ಲಿ ಕೂತು ಹಾಡುತ್ತ ಇರಬೇಕಾದರೆ, ನೀ ಏನ್ ಹೇಳ್ತಿದ್ದಿ ನೆನಪಿದಿಯಾ ನನ್ನ ಒಲವೇ?? ಹೋಗೋ ಕೋತಿ ಸುಮ್ನೆ ಹಟ್ಟಕ್ಕೆ ಏರಿಸಬೇಡ ಅಂತಿದ್ದೆ… ಇಲ್ಲ ಕಣೇ ನಿಜ ಹೇಳ್ತೀನಿ ಕೇಳು ನೀ ಯಾವತ್ತಿದ್ರೂ ನನ್ನ ರಾಜಕುಮಾರಿ:-)

ಆ ಕ್ಷಣಗಳನ್ನೆಲ್ಲಾ ನೆನೆಸಿಕೊಳ್ತಾ ಇದ್ರೆ ಮೈಮನವೆಲ್ಲಾ ರೋಮಾಂಚನದ ಅನುಭವ ಕಣೆ ಗೆಳತಿ…ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ ನಿನ್ನನು ಕಂಡ ದಿನವೇ ಹೊರಹೊಮ್ಮಿತು ನಿನ್ನ ಮೇಲಿನ ಪ್ರೀತಿ… ಹೌದು ಕಣೇ, ನೀನು ಜತೆಯಾದ ದಿನದಿಂದ ನನ್ನ ಪ್ರತಿನಿತ್ಯದ ಬೆಳಗುಗಳು ಇನ್ನಷ್ಟು ಸುಂದರವಾಗಿತ್ತು, ಮಧುರವಾಗಿತ್ತು, ಜೀವನ ಮುನ್ನಡೆಸ್ಸೋಕ್ಕೆ ಒಲವಿನ ದೋಣಿ ನನ್ನದಾಗಿತ್ತು ಎಂಬ ಹುರುಪಿತ್ತು 🙂

ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ

ಇಷ್ಟೆಲ್ಲಾ ನೆನಪಾಗಿದ್ದು ಮೊನ್ನೆ ಗೆಳೆಯನೊಂದಿಗೆ ಸಂಪಿಗೆ ರಸ್ತೆಯಲ್ಲಿ ಛತ್ರಿ ಇಡಿದು ಸೋನೆಮಳೆಯಲ್ಲಿ ಹೆಜ್ಜೆಹಾಕಬೇಕಾದರೆ. 🙂

ನಿಜ ಕಣೇ, ಕಣ್ಣಲ್ಲಿ ನೀರಿತ್ತು, ಮನದಲ್ಲಿ ನಿನ್ನ ನೆನಪಿತ್ತು… ಆದರೂ ಯಾರಿಗೂ ಗೊತ್ತಾಗದ ಹಾಗೆ ನಡೆಯುತ್ತಿದ್ದೆ, ಜೊತೆಗೆ ಮಳೆಗೆ ಧನ್ಯವಾದ ಹೇಳ್ತಿದ್ದೆ ಮೆಲ್ಲದನಿಯಲ್ಲಿ…  ಯಾಕಂದ್ರೆ ಅವ ನನ್ನ ಕಣ್ಣ ಒದ್ದೆ ಮಾಡಿ ಕಣ್ಣಲ್ಲಿದ್ದ ನೀರನ್ನ ಮರಮಾಚಿದ್ದಕ್ಕೆ, ಜೊತೆಗೆ ನಿನ್ನ ನೆನಪು ಮಾಡಿಕೊಟ್ಟಿದ್ದಕ್ಕೆ 🙂

ಹ ಹ್ಹ ಹ್ಹಾ… ಈ ಮಳೆಯೇ ಹೀಗೆ, ಕೇವಲ ಧರೆಗಿಳಿಯುವ ನೀರಲ್ಲ, ಹಳೆಯ ನೆನಪನ್ನು ಹೊತ್ತು ತರುವ ಗೆಳೆಯ 🙂

ನೀ ಏನ್ ಅಂತೀಯಾ… ನಿಜ ಅಲ್ಲವೇನೆ ನನ್ನ ಗೆಳತೀ??

ಇಂತಿ ನಿನ್ನ ಪ್ರೀತಿಯ;
ಅನಾಮಿಕ 🙂